/newsfirstlive-kannada/media/post_attachments/wp-content/uploads/2024/09/Darshan-Renukaswamy-Case-5.jpg)
ಪಟ್ಟಣಗೆರೆ ಶೆಡ್‌ನಲ್ಲಿ ಗುಬ್ಬಿ ಅಂತ ರೇಣುಕಾಸ್ವಾಮಿ ಅದೆಷ್ಟು ಬರ್ಬರವಾಗಿ ಕೊಲೆ ಆಗಿದ್ದಾನೆ ಗೊತ್ತಾ? ಪೊಲೀಸರ ಜಾರ್ಜ್ಶೀಟ್ನಲ್ಲಿನ ಒಂದೊಂದು ಪುಟವೂ ರಕ್ತದಲ್ಲೇ ಅದ್ದಿದಂತೆ ಕಾಣುತ್ತಿದೆ. ಅದರಲ್ಲೂ ಈ ಪ್ರಕರಣದ ಕೇಂದ್ರ ಬಿಂದುವಾಗಿರೋ ದರ್ಶನ್ ಸ್ವಇಚ್ಛಾ ಹೇಳಿಕೆ ಬಿಚ್ಚಿಟ್ಟ ಕ್ರೌರ್ಯ ಎಲ್ಲಾ ಸೀಮೆಗಳನ್ನು ದಾಟಿದ್ದು ಪೊಲೀಸರ ಎದುರು ದರ್ಶನ್ ಹೇಳಿರುವ ಆ ಸತ್ಯ ಕೊಲೆಯ ಭಯಾನಕ ರಹಸ್ಯಗಳನ್ನ ಬಿಚ್ಚಿಟ್ಟಿದೆ.
ಇದನ್ನೂ ಓದಿ: ರೇಣುಕಾಸ್ವಾಮಿಗೆ ಪವಿತ್ರಾ ನಂಬರ್ ಸಿಕ್ಕಿದ್ದು ಹೇಗೆ? ಮೆಸೇಜ್ ಮಾಡಿ ಬಲೆಗೆ ಬಿದ್ದ ಇಂಚಿಂಚೂ ಮಾಹಿತಿ ಇಲ್ಲಿದೆ!
ಪೊಲೀಸರ ಮುಂದೆ ದರ್ಶನ್ ಸ್ಫೋಟ ಮಾಡಿರೋ ಆ ಸತ್ಯ ಕ್ರೌರ್ಯದ ಕೇಕೆ ಯಾವ ಮಟ್ಟಕ್ಕೆ ಮುಟ್ಟಿದೆ ಅನ್ನೋದರ ಸಾಕ್ಷಿ ಕೊಟ್ಟಿದೆ. ಮೊದ ಮೊದಲು ಈ ಪ್ರಕರಣದಲ್ಲಿ ನಾನೇನೂ ಮಾಡೇ ಇಲ್ಲ ಸಾರ್ ಅಂತಿದ್ದ ದರ್ಶನ್ ಕೊನೆಗೂ ಸತ್ಯ ಒಪ್ಕೊಂಡಿದ್ದಾರೆ. ಪೊಲೀಸರ ಮುಂದೆ ಬೆಚ್ಚಿ ಬೀಳುವಂತಹ ಸತ್ಯಗಳನ್ನ ಬಾಯ್ಬಿಟ್ಟಿದ್ದಾರೆ. ಅಷ್ಟಕ್ಕೂ, ಪೊಲೀಸರೆದುರು ಖುದ್ದು ದರ್ಶನ್ ಕೊಟ್ಟಿರೋ ಹೇಳಿಕೆಗಳೇನು ಅನ್ನೋದರ ಸಂಪೂರ್ಣ ವಿವರ ಈ ಲೇಖನದೂದ್ದಕ್ಕೂ ಇದೆ.
4 ಪುಟಗಳ ಸ್ವಇಚ್ಛಾ ಹೇಳಿಕೆ: ದರ್ಶನ್ ಬಾಯ್ಬಿಟ್ಟ ಭಯಾನಕ ಸತ್ಯಗಳು!
ಪೊಲೀಸರು ಸಲ್ಲಿಸಿರುವ ಜಾರ್ಜ್ಶೀಟ್ ಒಳಗಿನ 4 ಪುಟಗಳು ರೇಣುಕಾಸ್ವಾಮಿಯ ಬರ್ಬರ ಕೊಲೆಯ ರಕ್ತಸಿಕ್ತ ಕಥೆ ಹೇಳುತ್ತಿದೆ. ಈ ಪ್ರಕರಣದ ಕೇಂದ್ರ ಬಿಂದು, ಆರೋಪಿ 2 ದರ್ಶನ್ ಪೊಲೀಸರಿಗೆ ಸ್ವ ಇಚ್ಛಾ ಹೇಳಿಕೆ ನೀಡಿದ್ದಾರೆ. ಇದೇ ಸ್ವ ಇಚ್ಛಾ ಹೇಳಿಕೆಯಲ್ಲೇ ಖುದ್ದು ದರ್ಶನ್ ರೇಣುಕಾಸ್ವಾಮಿ ಜೊತೆ ನಾನು ಸಾಫ್ಟ್ ಆಗಿಯೇ ಇದ್ದೇ ಅಂತಲೂ ಹೇಳಿಕೊಂಡಿದ್ದಾರೆ. ಆದರೇ, ಡಿ ಕ್ರೌರ್ಯದ 10 ಅಧ್ಯಾಯಗಳು ಓದೋಕೂ ಸಂಕಟವಾಗುತ್ತದೆ. ಕೇಳೋದಕ್ಕೂ ಕಷ್ಟವಾಗುತ್ತದೆ. ಅಷ್ಟರಮಟ್ಟಿಗಿನ ಹಿಂಸೆ ಪುಟ ಪುಟದಲ್ಲೂ ದಾಖಲಾಗಿದೆ.
ಕ್ರೌರ್ಯಕಾಂಡ 1 : 1.5 .ಕಿ.ಮೀ ದೂರದ ಪವಿತ್ರ ಪ್ರೇಮ & ಪವನ್ ಲೆಕ್ಕ
ದರ್ಶನ್ ಪಾಲಿಗೆ ಪವಿತ್ರಾ ಎಂಥಾ ಕ್ವಾಟ್ಲೆ ಕೀಟ್ಲೆ ಕೊಟ್ಟಿದ್ದಾರೆ ಅನ್ನೋದಕ್ಕೆ ಈ ಅಂಶ ಬಹುಮುಖ್ಯವಾಗಿದೆ. ಸಿನಿಮಾ ಚಾನ್ಸ್ಗಾಗಿ ಬಂದವರು ದರ್ಶನ್ರನ್ನ ಖೆಡ್ಡಾಗೆ ಕೆಡವಿಕೊಂಡಿದ್ದರು. ಎಷ್ಟರಮಟ್ಟಿಗೆ ದರ್ಶನ್ ಪವಿತ್ರಾ ಪ್ರೇಮ ಇತ್ತು ಅಂದ್ರೆ ವಿಜಯಲಕ್ಷ್ಮಿ ಇರೋ ಜಾಗದಿಂದ 1.5 ಕಿ.ಮೀ ದೂರದಲ್ಲೇ ಮನೆ ಖರೀದಿಸೋ ಸ್ಥಿತಿ ಎದುರಾಗಿತ್ತು. ಇದೇ ವಿಚಾರವನ್ನೇ ದರ್ಶನ್ ತಮ್ಮ ಸ್ವ ಇಚ್ಛಾ ಹೇಳಿಕೆಯಲ್ಲಿ ದಾಖಲಿಸಿದ್ದಾರೆ. ಅಷ್ಟೇ ಅಲ್ಲ, ರೇಣುಕಾಸ್ವಾಮಿ ಕೊಲೆ ಕೇಸ್ನ ಎ1 ಪವಿತ್ರಾ, ಎ2 ದರ್ಶನ್ ಹಾಗೂ ಎ3 ಪವನ್ ಒಂದಾಗಿ ಸೇರಿದ್ದು ಹೇಗೆ ಅನ್ನೋ ಕ್ಲಾರಿಟಿ ಕೂಡ ಕೊಟ್ಟಿದ್ದಾರೆ.
ದರ್ಶನ್ ಸ್ವಇಚ್ಛಾ ಹೇಳಿಕೆ 1
ಪವಿತ್ರಾಗೌಡ ಎಂಬುವವರು ಸುಮಾರು 10 ವರ್ಷಗಳಿಂದ ನನ್ನೊಂದಿಗೆ ಲಿವ್ ಇನ್ ರಿಲೇಷನ್‌ಷಿಪ್‌ನಲ್ಲಿದ್ದು, ಇವರು ಆರ್‌ಆರ್ ನಗರದಲ್ಲಿನ ನನ್ನ ಮೇಲಿನ ವಿಳಾಸದ ಮನೆಯಿಂದ ಸುಮಾರು ಒಂದೂವರೆ ಕಿಲೋ ಮೀಟರ್ ದೂರದಲಿರುತ್ತಾರೆ. ಪವನ್ ಎಂಬುವವನು ಐಡಿಯಲ್ ಹೋಮ್ಸ್‌ನ ನನ್ನ ಮನೆಯಲ್ಲಿ ಮತ್ತು ಪವಿತ್ರಾಗೌಡ ರವರು ವಾಸವಾಗಿರುವ ಮನೆಗಳಲ್ಲಿ ಮನೆ ಕೆಲಸವನ್ನು ಮಾಡಿಕೊಂಡು ಸುಮಾರು 8 ವರ್ಷಗಳಿಂದ ಮನೆ ನೋಡಿಕೊಳ್ಳುವ ಕೆಲಸ ಮಾಡಿಕೊಂಡಿರುತ್ತಾನೆ.
ಇದನ್ನೂ ಓದಿ:ದರ್ಶನ್ ವಿರುದ್ಧದ ಚಾರ್ಜ್ಶೀಟ್ಗೆ ಹೊಸ ಟ್ವಿಸ್ಟ್ ಕೊಡಲು ಮುಂದಾದ ದಾಸನ ಪರ ವಕೀಲರು..!
ದರ್ಶನ್ ಪವಿತ್ರಾರದ್ದು 10 ವರ್ಷಗಳ ಲಿವ್ ಇನ್ ರಿಲೇಷನ್ ಶಿಫ್ ಸಂಬಂಧ. ಹೀಗಂತ ಖುದ್ದು ದರ್ಶನ್ ಸ್ವ ಇಚ್ಛಾ ಹೇಳಿಕೆಯಲ್ಲಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ. ತಮ್ಮ ಪತ್ನಿ ವಿಜಯಲಕ್ಷ್ಮಿ ಮನೆಯಿಂದ ಒಂದೂವರೆ ಕಿ.ಮೀ ದೂರದಲ್ಲೇ ಇರೋ ರೀತಿಯಲ್ಲೇ ಪವಿತ್ರಾ ಗೌಡಗೆ ದರ್ಶನ್ ಮನೆ ಖರೀದಿಸಿಕೊಟ್ಟಿದ್ದಾರೆ. ಇನ್ನು, ರೇಣುಕಾಸ್ವಾಮಿ ಕೊಲೆ ಕೇಸ್ನ 3ನೇ ಆರೋಪಿ ಪವನ್ ದರ್ಶನ್ ಮನೆಯಲ್ಲೇ ಕೆಲಸಕ್ಕಿದ್ದ. ಈತನನ್ನ ಪವಿತ್ರಾ ಗೌಡ ಮನೆಗೆ ಕೆಲಸಕ್ಕೆ ಕಳುಹಿಸಿದ್ದು ಇದೇ ದರ್ಶನ್. ಅಲ್ಲಿಗೆ ಎ1 ಪವಿತ್ರಾ, ಎ2 ದರ್ಶನ್ ಹಾಗೂ ಎ3 ಪವನ್ ಪರಸ್ಪರ 8 ವರ್ಷಕ್ಕಿಂತ ಹೆಚ್ಚು ಸಮಯ ಗೊತ್ತಿರುವಂಥವರು ಅನ್ನೋದು ಖಾತ್ರಿಯಾಗುತ್ತದೆ.
ಕ್ರೌರ್ಯಕಾಂಡ 2:ರೇಣುಕಾಸ್ವಾಮಿ ಕೊಂದ ಟೀಮ್ ಒಂದಾಗಿದ್ದು ಹೇಗೆ?
ಖುದ್ದು ದರ್ಶನ್ ಹೇಳಿಕೆಯ ಪ್ರಕಾರ ರೇಣುಕಾಸ್ವಾಮಿ ಕೊಲೆ ಕೇಸ್ನ 17 ಆರೋಪಿಗಳು ಒಂದಾಗಿದ್ದು ರೋಚಕ ಕಹಾನಿಯಂತೆ ಕಾಣುತ್ತಿದೆ. ಯಾಕಂದ್ರೆ ಪ್ರತಿ ಆರೋಪಿಗೂ ಮತ್ತೊಬ್ಬ ಆರೋಪಿ ಜೊತೆ 10 ವರ್ಷಕ್ಕಿಂತ ಹೆಚ್ಚಿನ ಬಾಂಧವ್ಯ ಇರುವುದು ಕಾಣುತ್ತದೆ.
ದರ್ಶನ್ ಸ್ವಇಚ್ಛಾ ಹೇಳಿಕೆ 2
ನಂದೀಶ್ ಎಂಬುವವನು ಆಗಾಗ್ಗೆ ನನ್ನ ಜನ್ಮದಿನದ ಸಮಯದಲ್ಲಿ ನಮ್ಮ ಮನೆಯ ಬಳಿ ಬರುತ್ತಿದ್ದು, ನನ್ನ ಅಭಿಮಾನಿಯಾಗಿರುತ್ತಾನೆ. ಆತನ ಮುಖ ಪರಿಚಯವಿರುತ್ತದೆ. ಲಕ್ಷ್ಮಣ್ ಎಂಬುವವರು ಸುಮಾರು 15 ವರ್ಷಗಳಿಂದ ನನ್ನ ಬಳಿ ಕಾರ್ ಡ್ರೈವರ್ ಆಗಿ ಕೆಲಸ ಮಾಡಿಕೊಂಡಿರುತ್ತಾರೆ. ವಿನಯ್ ಎಂಬುವವರು ಸುಮಾರು 3-4 ವರ್ಷಗಳಿಂದ ಹೀಗೆ ಕಾಮನ್ ಫ್ರೆಂಡ್ಗಳಿಂದ ಪರಿಚಯವಾಗಿದ್ದು. ಆಗಾಗ್ಗೆ ನಮ್ಮ ಮನೆಗೆ ಬಂದು ಹೋಗುತ್ತಿರುತ್ತಾರೆ. ನಾಗರಾಜ್ ಎಂಬುವವರು ಮೈಸೂರಿನಲ್ಲಿರುವ ನನ್ನ ಫಾರ್ಮ್ ಹೌಸನ್ನು ನೋಡಿಕೊಳ್ಳುತ್ತಿರುತ್ತಾರೆ.
ಇದನ್ನೂ ಓದಿ:ರೇಣುಕಾಸ್ವಾಮಿ ಜೀವ ತೆಗೆಯೋ ಮುನ್ನ ದರ್ಶನ್ ಜೊತೆಗೆ ಜಗಳವಾಡಿದ್ದ ಪವಿತ್ರಾ; ಕಾರಣವೇನು?
ಹೀಗೆ, ನಂದೀಶ್ ದರ್ಶನ್ ಅಭಿಮಾನಿಯಾಗಿದ್ದು ಆತನ ಮುಖಪರಿಚಯವಷ್ಟೇ ಇರುತ್ತದೆ ಅನ್ನೋದನ್ನ ದರ್ಶನ್ ಒಪ್ಪಿಕೊಂಡಿದ್ದಾರೆ. ಇನ್ನುಳಿದಂತೆ ಲಕ್ಷ್ಮಣ್ ತನ್ನ ಕಾರ್ ಡ್ರೈವರ್ ಆಗಿದ್ದು. ವಿನಯ್ ಕಾಮನ್ ಫ್ರೆಂಡ್ ಎಂದು ಹೇಳಿಕೊಂಡಿದ್ದಾರೆ ದರ್ಶನ್. ನಾಗರಾಜ್ ಮೈಸೂರಿನ ಫಾರ್ಮ್ ಹೌಸ್ ನೋಡಿಕೊಳ್ಳುವ ವ್ಯಕ್ತಿ. ಹೀಗೆ ದೀಪಕ್, ಪ್ರದೂಷ್, ರಾಘವೇಂದ್ರ, ಚಿಕ್ಕಣ್ಣ, ಯಶಸ್ ಸೂರ್ಯ ಎಲ್ಲರ ಬಗ್ಗೆಯೂ ದರ್ಶನ್ ನನಗೆ ಗೊತ್ತು ಅನ್ನೋದನ್ನ ಹೇಳಿದ್ದಾರೆ. ಇನ್ನು, ಆರೋಪಿಗಳಾಗಿರೋ 17 ಮಂದಿ ಒಟ್ಟುಗೂಡೋದಕ್ಕೆ ಕಾರಣ ಏನೇನು ಅನ್ನೋದನ್ನ ಇಲ್ಲಿ ದರ್ಶನ್ ಹೇಳಿಕೊಂಡಿದ್ದಾರೆ.
ಕ್ರೌರ್ಯಕಾಂಡ 3 : ಕೆಟ್ಟ ಫೋಟೋ ಕಳಿಸಿದ್ದವನು ಬಂದಿದ್ದಾನೆ ಅಂದಿದ್ಯಾರು?
ದರ್ಶನ್ ರೇಣುಕಾಸ್ವಾಮಿ ವಿರುದ್ಧ ಹಲ್ಲು ಹಲ್ಲು ಮಸೆಯೋಕೆ ಕಾರಣ ಯಾರು? ಖುದ್ದು ಪವಿತ್ರಾ ಗೌಡನೇ ರೇಣುಕಾಸ್ವಾಮಿ ಅನ್ನೋ ವ್ಯಕ್ತಿ ಹೀಗೆಲ್ಲಾ ಮಾಡ್ತಿದ್ದಾನೆ ಅಂತ ಹೇಳಿಕೊಂಡರಾ? ಅನ್ನೋ ಪ್ರಶ್ನೆಗಳಿಗೆ ಖುದ್ದು ದರ್ಶನ್ ಬೇರೆಯದ್ದೇ ರೀತಿ ವಿವರಿಸಿದ್ದಾರೆ. ಜೂನ್ 8ರ ಶನಿವಾರ ಬೆಳಗ್ಗೆ ಕತ್ರಿಗುಪ್ಪೆಯಲ್ಲಿನ ಫ್ಲಾಟ್ನಿಂದ ಐಡಿಯಲ್ ಹೋಮ್ಸ್ ಮನೆಗೆ ಬಂದು ವರ್ಕೌಟ್ ಮುಗಿಸಿ ಮನೆಯಲ್ಲಿದ್ದೆ. ಇದೇ ವೇಳೆಯೇ ತನ್ನ ಗೆಳತಿ ಪವಿತ್ರಾ ಗೌಡಗೆ ಯಾರೋ ಕೆಟ್ಟದಾಗಿ ಮೆಸೇಜ್ ಮಾಡಿದ್ದವನ ಚರ್ಚೆ ಆಯ್ತು ಎಂದಿದ್ದಾರೆ.
ದರ್ಶನ್ ಸ್ವಇಚ್ಛಾ ಹೇಳಿಕೆ 3
ಮಧ್ಯಾಹ್ನ ಸುಮಾರು 3 ಗಂಟೆಯಲ್ಲಿ ಪವನ್ ನನ್ನ ಬಳಿ ಬಂದು ತನ್ನ ಮೊಬೈಲ್ ಅನ್ನು ನನಗೆ ತೋರಿಸಿ ಯಾವನೋ ಒಬ್ಬ ಗೌತಮ್ ಎಂಬ ಹೆಸರಿನ ಇನ್ಸ್‌ಟಾಗ್ರಾಂ ಖಾತೆಯಿಂದ ಪವಿತ್ರ ಅಕ್ಕನಿಗೆ ಸುಮಾರು ದಿನಗಳಿಂದ ತನ್ನ ಖಾಸಗಿ ಅಂಗಾಂಗಳ ಚಿತ್ರಗಳನ್ನು ಕಳುಹಿಸುತ್ತಿದ್ದಲ್ಲದೇ, ಪವಿತ್ರಾ ಅಕ್ಕನಿಗೆ ನಿನ್ನ ರೇಟ್ ಎಷ್ಟು? ನಾನು ರೂಂ ಮಾಡುತ್ತೇನೆ. ನೀನು ಬಾ. ನಾನು ದರ್ಶನ್‌ಗಿಂತ ಚೆನ್ನಾಗಿದ್ದೇನೆ ಇತ್ಯಾದಿಯಾಗಿ ಮೆಸೇಜ್‌ಗಳನ್ನು ಮಾಡಿರುವ ಬಗ್ಗೆ ಹೇಳಿದ್ದ.
ಇದನ್ನೂ ಓದಿ:ದರ್ಶನ್ ಗ್ಯಾಂಗ್‌ಗೆ ಮತ್ತೊಂದು ಬಿಗ್ ಶಾಕ್.. ನ್ಯಾಯಾಂಗ ಬಂಧನ ವಿಸ್ತರಿಸಿ ಕೋರ್ಟ್ ಆದೇಶ; ಹೇಳಿದ್ದೇನು?
ರಾಜರಾಜೇಶ್ವರಿ ನಗರದಲ್ಲಿರೋ ಸ್ಟೋನಿ ಬ್ರೂಕ್ಸ್ ರೆಸ್ಟೋರೆಂಟ್ನಲ್ಲಿ ಪ್ರದೋಷ್, ನಾಗರಾಜ್, ಮಾಲೀಕ ವಿನಯ್ ಹಾಗೂ ಯಶಸ್ ಸೂರ್ಯ, ನಟ ಚಿಕ್ಕಣ್ಣ ಒಟ್ಟಿಗೆ ಇದ್ದಾಗಲೇ ಪವನ್ ಇದೊಂದು ಸಂಗತಿ ಬಗ್ಗೆ ಚರ್ಚಿಸಿದ್ದ. ಅಣ್ಣಾ, ಪವಿತ್ರಾ ಅಕ್ಕನಿಗೆ ಯಾರೋ ಗೌತಮ್ ಅನ್ನೋ ಅಕೌಂಟ್ನಿಂದ ಕೆಟ್ಟದಾಗಿ ಮೆಸೇಜ್ ಮಾಡ್ತಿದ್ದಾನೆ. ಕೊಳಕು ಕೊಳಕು ಫೋಟೋ ಕಳಿಸುತ್ತಿದ್ದ ರೇಣುಕಾಸ್ವಾಮಿ ಬಂದಿದ್ದಾನೆ. ಅವನನ್ನ ರಾಘವೇಂದ್ರ ಹಾಗೂ ಅವನ ಗೆಳೆಯರು ಕಿಡ್ನಾಪ್ ಮಾಡಿಕೊಂಡು ಬಂದು ಪಾರ್ಕಿಂಗ್ ಶೆಡ್‌ನಲ್ಲಿ ಇಟ್ಟಿರುತ್ತಾರೆ ಎಂದು ಹೇಳಿದ್ದ. ಆಗ ಖುದ್ದು ದರ್ಶನ್ ಪವಿತ್ರಾ ಗೌಡಗೆ ಫೋನ್ ಮಾಡಿ ಸ್ಟೋನಿ ಬ್ರೂಕ್ಸ್ನಿಂದ ಊಟ ಕಳಿಸುತ್ತೇನೆ ಅಂದಿದ್ದ. ಅಷ್ಟೇ ಅಲ್ಲ, ಪವಿತ್ರಾ ಊಟ ಮಾಡುವ ಸಮಯದಲ್ಲಿ ವಿಡಿಯೋ ಕಾಲನ್ನು ಮಾಡಿ ಮಾತನಾಡಿರುತ್ತೇನೆ ಅನ್ನೋದನ್ನೂ ದರ್ಶನ್ ಹೇಳಿಕೊಂಡಿದ್ದಾರೆ. ಊಟ ಮಾಡಿದ ನಂತರ ಶೆಡ್ಗೆ ಹೋಗಿ ಅವನನ್ನು ಸರಿಯಾಗಿ ವಿಚಾರಿಸಿಕೊಂಡು ಬರೋಣ ಎಂದು ತಿಳಿಸಿರುತ್ತೇನೆ ಅನ್ನೋ ಮೂಲಕ ರೇಣುಕಾಸ್ವಾಮಿ ಕೊಲೆ ಅಧ್ಯಾಯ ಶುರುವಾಗಿದ್ದು ಹೇಗೆ ಅನ್ನೋ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಕ್ರೌರ್ಯಕಾಂಡ 4 :ರೇಣುಕಾಸ್ವಾಮಿ ಜೊತೆ ದರ್ಶನ್ ಸಂಭಾಷಣೆ ಸಾಫ್ಟ್ ಆಗಿತ್ತಾ?
ಖುದ್ದು ದರ್ಶನ್ ಹೇಳಿಕೆ ನೋಡಿದರೇ ರೇಣುಕಾಸ್ವಾಮಿ ಜೊತೆ ಸಾಫ್ಟ್ ಆಗಿಯೇ ಟ್ರೀಟ್ ಮಾಡಿದ್ರು ಅನಿಸುತ್ತದೆ. ಪ್ರದೂಷ್ ಸ್ಕಾರ್ಫಿಯೋದಲ್ಲಿ ಪವಿತ್ರಾ ಮನೆಗೆ ಬಂದಿದ್ದ ದರ್ಶನ್ 4.30 ಹೊತ್ತಿಗೆ ಶೆಡ್ನತ್ತ ಬಂದಿದ್ದ. ದರ್ಶನ್, ಪವಿತ್ರಾ, ಪ್ರದೂಷ್ ವಾಹನದಿಂದ ಕೆಳಗೆ ಇಳಿಯೋ ಹೊತ್ತಿಗೆ ಒಬ್ಬ ವ್ಯಕ್ತಿ ವಾಹನಕ್ಕೆ ಒರಗಿಕೊಂಡು ಕೂತಿರುವುದು ಕಾಣಿಸುತ್ತದೆ. ಅಲ್ಲಿ ಕುಳಿತಿರೋ ವ್ಯಕ್ತಿಯೇ ಅಕ್ಕನಿಗೆ ಕೆಟ್ಟ ಮೆಸೇಜ್, ಕೊಳಕು ಫೋಟೋ ಕಳುಹಿಸಿದವನು ಅಂತ ಪವನ್ ಹೇಳಿದ್ದ.
ದರ್ಶನ್ ಸ್ವಇಚ್ಛಾ ಹೇಳಿಕೆ 4
ಆತನಿಗೆ ನಾನು ಬರುವ ಮೊದಲೇ ಹೊಡೆದಂತೆ ಕಾಣುತ್ತಿತ್ತು. ನಾನು ಆತನಿಗೆ ಇದನ್ನು ಕಳುಹಿಸಿರುವುದು ನೀನೇನಾ ಅಂತ ಕೇಳಿದ್ದೆ. ಆದಕ್ಕೆ ಅವನು ಹೌದು ನಾನೇ ಎಂದಿದ್ದ. ಇದು ನಿನಗೆ ಬೇಕಾ? ನಿನ್ನ ಸಂಬಳ ಎಷ್ಟು ಎಂದು ಕೇಳಿದೆ. 20 ಸಾವಿರ ಎಂದು ಹೇಳಿದ. ನಿನಗೆ ತಿಂಗಳಿಗೆ 20 ಸಾವಿರ ಸಂಬಳ, ನನ್ನ ಮಗನೇ ನೀನು ಇವಳನ್ನು ಮೈಂಟೇನ್ ಮಾಡಲು ಸಾಧ್ಯನಾ? ಈ ರೀತಿಯಾಗಿ ಬಾ ಎಂದು ಕೆಟ್ಟದಾಗಿ ಮೆಸೇಜ್ ಮಾಡಿದ್ದೀಯಲ್ಲ ಎಂದು ಕೇಳಿದ್ದಕ್ಕೆ, ಆತ ಏನೂ ಸಹ ಮಾತಾಡಲಿಲ್ಲ. ನಾನು ಆತನಿಗೆ ಕೈಯಿಂದ ಹೊಡೆದೆ ಹಾಗೂ ಕಾಲಿನಿಂದ ಬಲವಾಗಿ ತಲೆಯ ಭಾಗಕ್ಕೆ ಹಾಗೂ ಕತ್ತಿಗೆ ಮತ್ತು ಎದೆಯ ಭಾಗಕ್ಕೆ ಒದ್ದೆ. ಅಲ್ಲಿಯೇ ಇದ್ದ ಬಾಗಿದ ಮರದ ಕೊಂಬೆಯನ್ನು ಮುರಿದುಕೊಂಡು ಅದರಲ್ಲಿ ಆತನಿಗೆ ಹೊಡೆದನು ಮತ್ತು ನಾನು ಆತನಿಗೆ ಒಂದೆರಡು ಏಟನ್ನು ನನ್ನ ಕೈಗಳಿಂದ ಗುದ್ದಿದೆ.
ಇದನ್ನೂ ಓದಿ:ತಮಿಳು ಖ್ಯಾತ ನಟನ ದಾಂಪತ್ಯದಲ್ಲಿ ಬಿರುಕು.. 15 ವರ್ಷದ ಬಳಿಕ ಸ್ಟಾರ್ ಜೋಡಿ ವಿಚ್ಛೇದನ!
ಸಾಫ್ಟಾಗಿಯೇ ಆರಂಭಿಸಿದ ಮಾತು ಎಂಡ್ನಲ್ಲಿ ಏಟಿನ ಮೂಲಕವೇ ಮುಗಿದಿದೆ. ಒಂದಲ್ಲ ಹಲವು ಸಲ ರೇಣುಕಾಸ್ವಾಮಿ ಮೇಲೆ ಖುದ್ದು ದರ್ಶನ್ ಹಲ್ಲೆ ಮಾಡಿದ್ದನ್ನ ಹೇಳಿಕೆಯಲ್ಲಿ ಒಪ್ಪಿಕೊಂಡಿದ್ದಾರೆ. ಮರದ ಟೊಂಗೆಯಿಂದಲೂ ಹೊಡೆದಿದ್ದೇನೆ ಎಂದು ಹೇಳಿದ್ದಾರೆ.
ಕ್ರೌರ್ಯಕಾಂಡ 5 : ಪವಿತ್ರಾ ಬಂದ ಕೂಡಲೇ ರೇಣುಕಾಸ್ವಾಮಿ ಮಾಡಿದ್ದೇನು?
ಒಂದು ಸುತ್ತಿನ ಹಲ್ಲೆಯ ಬಳಿಕ ದರ್ಶನ್ ಕಾರಿನಲ್ಲಿ ಕುಳಿತಿದ್ದ ಪವಿತ್ರಾ ಗೌಡಳನ್ನು ಪಟ್ಟಣಗೆರೆ ಶೆಡ್ಗೆ ಕರೆದುಕೊಂಡು ಬರುವುದಕ್ಕೆ ಹೇಳಿದ್ದ. ಆಗ ಪವಿತ್ರಾ ಅಲ್ಲಿಗೆ ಬಂದಾಗ, ನೋಡು ನೀನು ಮೆಸೇಜ್ ಮಾಡುತ್ತಿದ್ದವಳು ಇವಳೇನೇ ಎಂದು ಹೇಳಿ, ಪವಿತ್ರಾಳಿಗೆ ತನ್ನ ಚಪ್ಪಲಿಯನ್ನು ತೆಗೆದು ಹೊಡೆಯುವಂತೆ ಹೇಳಿದೆ. ಆಗ ಆಕೆ ಹೊಡೆದಿದ್ದು, ಆಕೆಯ ಕಾಲಿಗೆ ಬಿದ್ದು ಕ್ಷಮೆ ಕೇಳುವಂತೆ ಹೇಳಿದಾಗ, ಆತ ಪವಿತ್ರಾ ಕಾಲಿಗೆ ಬಿದಿದ್ದು, ಪವಿತ್ರಾ ಹೆದರಿಕೊಂಡು ಹಿಂದೆ ಹೋದಳು, ಆಗ ನಾನು ಆಕೆಯನ್ನು ಕಾರಿನ ಬಳಿ ಬಿಡುವಂತೆ ಪ್ರದೋಷ್ಗೆ ಹೇಳಿದೆ. ಹೀಗೆ ದರ್ಶನ್ ರೇಣುಕಾಸ್ವಾಮಿ ಪವಿತ್ರಾಳನ್ನು ಕಂಡ ಕೂಡಲೇ ಏನೇನಾಯ್ತು ಅನ್ನೋದನ್ನ ಸ್ವಇಚ್ಛಾ ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಕ್ರೌರ್ಯಕಾಂಡ 6:ರೇಣುಕಾಸ್ವಾಮಿಗೆ ಯಾರೆಲ್ಲಾ ಹೆಂಗೆಲ್ಲಾ ಹೊಡೆದರು ಗೊತ್ತಾ?
ದರ್ಶನ್ ಸ್ವ ಇಚ್ಛಾ ಹೇಳಿಕೆ ಪ್ರಕಾರ ಪ್ರತಿಯೊಬ್ಬರೂ ಸಹ ರೇಣುಕಾಸ್ವಾಮಿಯನ್ನು ಥಳಿಸಿದ್ದಾರೆ. ದರ್ಶನ್ ಪವಿತ್ರಾ ಗೌಡಳನ್ನ ಮನೆಗೆ ಡ್ರಾಪ್ ಮಾಡಿ ಮಾಡಿಸುವಂತೆ ವಿನಯ್ಗೆ ಹೇಳಿದ್ದ. ಅಷ್ಟರಲ್ಲಿಯೇ ಅಲ್ಲಿಗೆ ಬಂದಿದ್ದ ಕಾರ್ ಡ್ರೈವರ್ ಲಕ್ಷ್ಮಣ್ ರೇಣುಕಾಸ್ವಾಮಿಗೆ ಕೈಯಿಂದ ಕುತ್ತಿಗೆ ಬೆನ್ನಿಗೆ ಹೊಡೆದಿದ್ದ. ನಂದೀಶ್ ರೇಣುಕಾಸ್ವಾಮಿ ಎತ್ತಿಕೊಂಡು ಜೋರಾಗಿ ಮುಂದೆ ಕುಕ್ಕಿದ್ದ. ಇದೇ ವೇಳೆಯೇ ದರ್ಶನ್ ಪವನ್ಗೆ ರೇಣುಕಾಸ್ವಾಮಿ ಇದೇ ರೀತಿ ಯಾರೆಗೆಲ್ಲಾ ಕೆಟ್ಟ ಕೆಟ್ಟ ಮೆಸೇಜ್‌ಗಳನ್ನು ಕಳುಹಿಸಿದ್ದಾನೆಂದು ಕೇಳಿದ್ದ. ಪವನ್ ರೇಣುಕಾಸ್ವಾಮಿ ಫೋನ್ ತೆಗೆದುಕೊಂಡು ಯಾರಿಗೆಲ್ಲಾ ಕಳುಹಿಸಿದ್ದ ಅನ್ನೋದನ್ನ ತೋರಿಸುತ್ತಾ, ಮೆಸೇಜ್‌ಗಳನ್ನು ಓದಿದ್ದ. ಅಲ್ಲಿಂದ ಕೆಟ್ಟ ಫೋಟೋಗಳನ್ನೂ ಸಹ ತೋರಿಸಿದ್ದ. ರೇಣುಕಾಸ್ವಾಮಿ ಅನೇಕ ಚಲನಚಿತ್ರ ನಟಿಯರಿಗೂ ಹೀಗೆಯೇ ಫೋಟೋ ಕಳುಹಿಸಿದ್ದ. ಲಕ್ಷ್ಮಣ್, ಅಣ್ಣಾ ಇವನದ್ದು ಇದೇ ಚಾಳಿ, ಬಹುಪಾಲು ಕೆಟ್ಟ ಮೆಸೇಜ್‌ಗಳನ್ನು ಅಕ್ಕನಿಗೆ ಕಳುಹಿಸಿದ್ದಾನೆ ಅಂತ ಮೆಸೇಜನ್ನು ದರ್ಶನ್ಗೆ ತೋರಿಸಿದ್ದ. ಆಗ ದರ್ಶನ್ ರೇಣುಕಾಸ್ವಾಮಿಗೆ ಬೈದು ಕಾಲಿನಿಂದ ಒಂದರೆಡು ಸಲ ಒದ್ದಿದ್ದ. ಇಷ್ಟೂ ವಿಚಾರಗಳನ್ನು ದರ್ಶನ್ ಪೊಲೀಸರಿಗೆ ನೀಡಿರುವ ಸ್ವ ಇಚ್ಛಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ