/newsfirstlive-kannada/media/media_files/2026/02/02/chamarajanagara-2-2026-02-02-08-15-36.jpg)
ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲದಲ್ಲಿ ಆರತಕ್ಷತೆಗೆ ತೆರಳುತ್ತಿದ್ದ ವರನ ಮೇಲೆ ನಡೆದಿದ್ದ ಚೂರಿ ಇರಿತದ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಮದುವೆ ಮನೆಯಲ್ಲಿ ಅಮಾಯಕಿಯಂತೆ ನಟಿಸಿದ್ದ ವಧು ನಯನಾಳೇ ಈ ಘಟನೆಯ ಅಸಲಿ ಸಂಚುಗಾರ್ತಿ ಎಂಬುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಏನಿದು ಪ್ರಕರಣ?
ಕಳೆದ ಜನವರಿ 27 ರಂದು ವರ ರವೀಶ್ ತನ್ನ ಆರತಕ್ಷತೆಗಾಗಿ ಕಾರಿನಲ್ಲಿ ತೆರಳುತ್ತಿದ್ದಾಗ ಮಾರ್ಗಮಧ್ಯೆ ವ್ಯಕ್ತಿಯೊಬ್ಬ ಕಾರನ್ನು ಅಡ್ಡಗಟ್ಟಿ ಚೂರಿ ಇರಿದಿದ್ದ. ರಕ್ತದ ಮಡುವಿನಲ್ಲಿ ಬಿದ್ದಿದ್ದ ವರನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂಬಂಧ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕೊಳ್ಳೇಗಾಲ ಡಿವೈಎಸ್ ಪಿ ಧರ್ಮೇಂದ್ರ ನೇತೃತ್ವದ ತಂಡ ತನಿಖೆ ಕೈಗೆತ್ತಿಕೊಂಡಿತು. ತಾಂತ್ರಿಕ ಸಾಕ್ಷ್ಯಗಳನ್ನು (Technical Evidence) ಕಲೆ ಹಾಕಿದಾಗ ಪೊಲೀಸರಿಗೆ ದಿಗಿಲು ಹುಟ್ಟಿಸುವ ಸತ್ಯಾಂಶಗಳು ತಿಳಿದುಬಂದಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಧು ನಯನಾ, ಆಕೆಯ ಪ್ರಿಯತಮ ದರ್ಶನ್ ಹಾಗೂ ಕೃತ್ಯಕ್ಕೆ ಸಹಕರಿಸಿದ ಓರ್ವ ಅಪ್ರಾಪ್ತನನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ರಾಜ್ಯಕ್ಕೆ ಹೆಚ್ಚಿನ ತೆರಿಗೆ ಪಾಲು; ಕಾಂಗ್ರೆಸ್ ಸರ್ಕಾರದ ಟೀಕೆಗಳಿಗೆ ಉತ್ತರ ಎಂದ ಕುಮಾರಸ್ವಾಮಿ
/filters:format(webp)/newsfirstlive-kannada/media/media_files/2026/01/30/chamarajanagara-1-2026-01-30-16-16-23.jpg)
ಪ್ರಿಯತಮನ ಜೊತೆ ಸೇರಿ ಸ್ಕೆಚ್
ನಯನಾ ಎಂಬಾಕೆ ದರ್ಶನ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ದರ್ಶನ್ ತಮಟೆ ಹೊಡೆಯುವ ಕೆಲಸ ಮಾಡುತ್ತಿದ್ದ. ತನ್ನ ಪ್ರೀತಿಯ ವಿಷಯವನ್ನು ಮನೆಯಲ್ಲಿ ಹೇಳಲು ನಯನಾ ಹೆದರಿದ್ದಳು. ಮನೆಯವರು ರವೀಶ್ ಜೊತೆ ಮದುವೆ ನಿಶ್ಚಯಿಸಿದಾಗ, ಮದುವೆ ನಿಲ್ಲಿಸಲು ನಯನಾ ಹೈಡ್ರಾಮಾ ಶುರು ಮಾಡಿದ್ದಳು.
ಒಂದೆಡೆ ರವೀಶ್ ಜೊತೆ 'ನಿನ್ನನ್ನೇ ಮದುವೆಯಾಗುತ್ತೇನೆ' ಎಂದು ಪ್ರೀತಿಯ ನಾಟಕವಾಡುತ್ತಿದ್ದ ನಯನಾ, ಇನ್ನೊಂದೆಡೆ ಪ್ರಿಯತಮ ದರ್ಶನ್‌ಗೆ ರವೀಶ್ ಮೊಬೈಲ್ ಸಂಖ್ಯೆ ನೀಡಿ ಬೆದರಿಕೆ ಕರೆ ಹಾಗೂ ಮೆಸೇಜ್ ಹಾಕಿಸುತ್ತಿದ್ದಳು. ರವೀಶ್ ಈ ಬೆದರಿಕೆಗಳಿಗೆ ಸೊಪ್ಪು ಹಾಕಿರಲಿಲ್ಲ. ಇದರಿಂದ ಆಕ್ರೋಶಗೊಂಡ ನಯನಾ, ಹೇಗಾದರೂ ಮಾಡಿ ಮದುವೆ ನಿಲ್ಲಿಸಲು ಪ್ರಿಯತಮನ ಮೂಲಕ ಚೂರಿ ಇರಿಯುವ ಸಂಚು ರೂಪಿಸಿದ್ದಳು.
/filters:format(webp)/newsfirstlive-kannada/media/media_files/2026/01/30/chamarajanagara-2026-01-30-16-14-01.jpg)
ಚೂರಿ ಇರಿತದ ಘಟನೆ ನಡೆದ ಬಳಿಕ ರವೀಶ್ ಮದುವೆಯನ್ನು ಮುರಿದುಕೊಳ್ಳಲು ನಿರ್ಧರಿಸಿದ್ದ. ಈ ವೇಳೆ ಆಸ್ಪತ್ರೆಗೆ ಓಡಿ ಬಂದಿದ್ದ ನಯನಾ, ಮದುವೆ ಕ್ಯಾನ್ಸಲ್ ಮಾಡಬೇಡಿ, ನನ್ನ ಕಥೆ ಏನಾಗಬೇಡ? ಎಂದು ಕಣ್ಣೀರು ಹಾಕುತ್ತಾ ರವೀಶ್ ಮನವೊಲಿಸಲು ನಾಟಕವಾಡಿದ್ದಳು. ಇಷ್ಟೆಲ್ಲಾ ಡ್ರಾಮಾ ಮಾಡುತ್ತಿದ್ದರೂ, ನಯನಾ ನಿರಂತರವಾಗಿ ತನ್ನ ಪ್ರಿಯತಮ ದರ್ಶನ್ ಜೊತೆ ಸಂಪರ್ಕದಲ್ಲಿದ್ದಳು ಎಂಬುದು ಕಾಲ್ ರೆಕಾರ್ಡ್‌ಗಳಿಂದ ಪತ್ತೆಯಾಗಿದೆ.
ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಮದುವೆಯಾಗಿ ಸುಖವಾಗಿರಬೇಕಿದ್ದ ವಧು ಈಗ ಪ್ರಿಯತಮನ ಜೊತೆ ಜೈಲು ಪಾಲಾಗಿದ್ದಾಳೆ. ಕೊಳ್ಳೇಗಾಲ ಪೊಲೀಸರ ಈ ಕ್ಷಿಪ್ರ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ:ಘಟಪ್ರಭಾ: SDT ಪ್ರೌಢಶಾಲೆ ಹಾಗೂ PU ಕಾಲೇಜ್ ನೂತನ ಕಟ್ಟದ ಲೋಕಾರ್ಪಣೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us