/newsfirstlive-kannada/media/media_files/2025/08/25/banu-mushtaq-and-pratap-shimah-2025-08-25-19-19-43.jpg)
ಮೈಸೂರು ದಸರಾ.. ಕರ್ನಾಟಕದ ಸಾಂಸ್ಕೃತಿಕ ವೈಭವ. ನಾಡು-ನುಡಿಯ ಸಂಭ್ರಮ.. ಗತ ಕಾಲದ ನೆನಪುಗಳ ಸಡಗರ.. ನಗರಕ್ಕೆ ವಿದ್ಯುತ್ ದೀಪಗಳ ಮುತ್ತಿನ ಅಲಂಕಾರ.. ಅಂಬಾವಿಲಾಸ ಅರಮನೆಯಲ್ಲಿ ರಾಜರ ಖಾಸಗಿ ದರ್ಬಾರ್.. ನಾಡಿನ ಅಧಿದೇವತೆ ಚಾಮುಂಡಿ ಹೊತ್ತು ಸಾಗುವ ಗಜಪಡೆಗಳ ಗಜಗಾಂಭೀರ್ಯದ ಮೆರವಣಿಗೆ.. ಅಂದ್ಹಾಗೆ ಮನೆ-ಮನಗಳ ದಸರಾಗೆ ದಿನಗಣನೆಗಳು ಶುರುವಾಗಿವೆ. ಜೊತೆಗೆ ವಿವಾದಗಳಿಗೂ ನಂಟು ಬೆಸೆದು ಬರ್ತಿದೆ.
ದಸರಾದಲ್ಲಿ ಜಾತ್ಯಾತೀತ vs ಧಾರ್ಮಿಕ ಸಂಘರ್ಷ
ಕೋಟಿ ಕೋಟಿ ಹೃದಯಗಳು ಕಣ್ತುಂಬಿಕೊಳ್ಳೋಕೆ ಕಾತರದ ಕಣ್ಣುಗಳಿಗೆ ಹಬ್ಬರ ಉಡುಗೊರೆಯ ಆಗಮನ ಆಗ್ತಿದೆ.. ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಗೆ ಈ ಬಾರಿ ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಆಯ್ಕೆ ಆಗಿದ್ದಾರೆ. ಈ ಆಯ್ಕೆಯೇ ಹಲವು ಅಪಸ್ವರಗಳು ಏಳುವಂತೆ ಮಾಡಿದೆ. ಬಾನು ಮುಷ್ತಾಕ್‌ರನ್ನ ಆಯ್ಕೆಗೆ ಹಿಂದೂ ಸಂಘಟನೆಗಳ ವಿರೋಧಿಸಿವೆ.
ಇದನ್ನೂ ಓದಿ:‘ಅಮ್ಮನಿಲ್ಲದ ಮೊದಲ ವರ್ಷವಿದು..’ ಅಭಿಮಾನಿಗಳಿಗೆ ಕಿಚ್ಚ ಭಾವುಕ ಮನವಿ
ಮೈಸೂರು ಮಾಜಿ ಸಂಸದ ಪ್ರತಾಪ್ ಸಿಂಹ ಹಲವು ಧಾರ್ಮಿಕ ಸೂಕ್ಷ್ಮತೆಗಳನ್ನ ಪ್ರಸ್ತಾಪಿಸಿ ಸರ್ಕಾರದ ನಡೆಯನ್ನ ಖಂಡಿಸಿದ್ದಾರೆ. ಬಾನು ಮುಷ್ತಾಕ್ ಬಗ್ಗೆ ಹೆಮ್ಮೆ ಇದೆ.. ಆದ್ರೆ ದಸರಾ ಜಾತ್ಯಾತೀತತೆ ಪ್ರತೀಕ ಅಲ್ಲ.. ಇದು ಧಾರ್ಮಿಕ ಆಚರಣೆ.. ಇಲ್ಲಿ ದುರ್ಗಾ ಪೂಜೆ, ನವರಾತ್ರಿ ಉತ್ಸವ ಇರುತ್ತೆ. ತಾಯಿ ಚಾಮುಂಡಿಗೆ ಪೂಜೆ ಸಲ್ಲಿಸಿ ಚಾಲನೆ ನೀಡೋದ್ರಿಂದ ಏಕದೇವೋಪಾಸನೆಯ ಬಾನು ಮುಷ್ತಾಕ್ಗೆ ಅವರ ಧಾರ್ಮಿಕತೆ ಅಡ್ಡ ಬರಲ್ವಾ ಅನ್ನೋ ಪ್ರಶ್ನೆ ಎತ್ತಿದ್ದಾರೆ.
ಬೂಕರ್ ಪ್ರಶಸ್ತಿಯನ್ನು ಪಡೆದಿರುವ ಭಾನು ಮುಷ್ತಾಕ್ ಅವರನ್ನು ಮುಂದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಮಾಡಿ, ಆದರೆ ಧಾರ್ಮಿಕ ನಂಬಿಕೆ ಮತ್ತು ಆಚರಣೆಯ ಪ್ರತೀಕವಾಗಿರುವ ದಸರಾ ಉದ್ಘಾಟನೆಗೆ ಕರೆಯುವುದು ಸೂಕ್ತವೇ?! ಕನ್ನಡವನ್ನು ಭುವನೇಶ್ವರಿಯಾಗಿ ಒಪ್ಪದ ಈಕೆ, ತಾಯಿ ಚಾಮುಂಡೇಶ್ವರಿಯನ್ನು ನಾಡದೇವತೆಯಾಗಿ ಒಪ್ಪಿಕೊಂಡು ಪುಷ್ಪಾರ್ಚನೆ ಮಾಡಿಯಾರೆ ಬೂಕರ್ ಭಾನು?
ಪ್ರತಾಪ್ ಸಿಂಹ, ಮಾಜಿ ಸಂಸದ
ಕಾಂಗ್ರೆಸ್ ನಾಯಕರು ಮಾತ್ರ ಇದನ್ನ ಜಾತ್ಯಾತೀತ ನಿಲುವಿನಲ್ಲಿ ಮಾತ್ರ ನೋಡ್ತಿದೆ. ಧರ್ಮದ ವಿಚಾರದ ಚರ್ಚೆ ಜನರಿಗೆ ಬಿಟ್ಟದ್ದು ಅಂತ ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ ಹೇಳಿದ್ದಾರೆ. ಇದಕ್ಕೆ ಕಾನೂನು ಸಚಿವ ಹೆಚ್.ಕೆ.ಪಾಟೀಲ್, ಗೃಹ ಸಚಿವ ಪರಮೇಶ್ವರ್ ಸಹ ಸಹಮತಿಸಿದ್ದಾರೆ.
ಇದನ್ನೂ ಓದಿ:ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಯಾರಾರಿಗೆ ಎಷ್ಟೆಷ್ಟು ಕೋಟಿ ಕೊಟ್ರು?
ದಸರಾ ಉದ್ಘಾಟನೆಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ವಿಜೇತೆ ಮತ್ತು ಹಲವು ಜನಪರ ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವುದರ ಬಗ್ಗೆ ಬಿಜೆಪಿಗರು ಆಕ್ಷೇಪ ವ್ಯಕ್ತಪಡಿಸಿರುವುದು ಅತ್ಯಂತ ಬೇಸರದ ಸಂಗತಿ.
— Dr H C Mahadevappa(Buddha Basava Ambedkar Parivar) (@CMahadevappa) August 25, 2025
ಬೂಕರ್ ಪ್ರಶಸ್ತಿಯ ಮೂಲಕ ಕನ್ನಡ ನಾಡಿನ ಕಂಪನ್ನು ವಿಶ್ವದೆಲ್ಲೆಡೆ ಹಬ್ಬುವ ಕೆಲಸ ಮಾಡಿರುವ… pic.twitter.com/QOhWSved1b
ಇನ್ನು ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಪ್ರತಿಕ್ರಿಯಿಸಿ.. ಈ ಹಿಂದೆ ನಿಸ್ಸಾರ್ ಅಹ್ಮದ್ ದಸರಾ ಉದ್ಘಾಟನೆ ಮಾಡಿದ್ದಾರೆ. ಮಿರ್ಜಾ ಇಸ್ಮಾಯಿಲ್ ಮೈಸೂರಿನಲ್ಲಿ ದಿವಾನ್ ಆಗಿದ್ದರು. ಇದರಲ್ಲಿ ವಿರೋಧ ಮಾಡೋದು ಸರಿಯಿಲ್ಲ. ಇದು ಧಾರ್ಮಿಕ ವಿಚಾರ ಅಲ್ಲ. ಇದು ನಾಡಹಬ್ಬ ದಸರಾ ರಾಜ್ಯದಲ್ಲಿ ತುಂಬಾ ಆಚರಣೆ ಮಾಡೋದು. ಒಂದು ಸಮುದಾಯ ಬಿಟ್ಟು ದಸರಾ ಮಾಡೋದಾ? ಎಂದು ಪರಮೇಶ್ವರ್ ಅವರು ಪ್ರಶ್ನೆ ಮಾಡಿದ್ದಾರೆ.
ದಸರಾ ಸಾಂಸ್ಕೃತಿಕ ಕಾರ್ಯಕ್ರಮ. ಅದಕ್ಕೆ ಬೇರೆ ವ್ಯಾಖ್ಯಾನ ಮಾಡಬಾರದು. ರಾಜಕೀಯ ಬೆರೆಸಬೇಡಿ, ಇದೊಂದು ಸಾಂಸ್ಕೃತಿಕ ಕಾರ್ಯಕ್ರಮ. ಅವರನ್ನ ಅತಿಥಿಯಾಗಿ ಮಾಡಿರುವುದು ನಮ್ಮ ಸರ್ಕಾರದ ಚಿಂತನೆ.
ಹೆಚ್.ಕೆ.ಪಾಟೀಲ್, ಸಚಿವ
ಈ ಎಲ್ಲಾ ವಿವಾದಗಳ ನಡುವೆಯೂ ಬಾನು ಮುಷ್ತಾಕ್ ಅವರಿಗೆ ಬೆಂಗಳೂರಿನ ಕಲಾವಿದೆ ಅಮ್ಮನ ಮಡಿಲು ಸಂಸ್ಥಾಪತಿ ಶಶಿಕಲಾ, ಸಂಪ್ರದಾಯದಂತೆ ಬಾಗಿನ ನೀಡಿದ್ದಾರೆ. ಹೂ, ಬಳೆ, ಸೀರೆ, ಅರಿಶಿನ ಕುಂಕುಮ ನೀಡಿ ಶುಭಕೋರಿದ್ರು. ಇನ್ನು, ಖುಷಿಯಾಗೇ ಬಾಗಿನ ಸ್ವೀಕರಿಸಿದ ಬಾನು ಮುಷ್ತಾಕ್, ದಸರಾ, ನಮ್ಮ ನಾಡಿನ ಸಂಸ್ಕೃತಿಯ ಭಾಗ ಅಂತ ಬಣ್ಣಿಸಿ ದಸರಾ ಉದ್ಘಾಟಿಸೋದಾಗಿ ಹೇಳಿದ್ರು.
ಖುಷಿ ಆಗಿದೆ..
ಖಂಡಿತಾ ನನಗೆ ಖುಷಿ ವಿಚಾರ. ದಸರಾವನ್ನು ನಾವು ಹಲವು ಪ್ರಭೇದಗಳಲ್ಲಿ ನೋಡಬಹುದು. ನೀವು ಚಾಮುಂಡೇಶ್ವರಿ ತಾಯಿ ಅಂತಿರಿ, ನಿಮ್ಮ ಭಾವವನ್ನು ಗೌರವಿಸುತ್ತೇನೆ. ಅನೇಕರು ಇದನ್ನ ನಾಡಹಬ್ಬ ಅಂತಾರೆ, ಅದನ್ನು ಗೌರವಿಸುತ್ತೇನೆ. ನಾಡಹಬ್ಬ, ಚಾಮುಂಡೇಶ್ವರಿ ತಾಯಿ ಎಂದು ಪ್ರೀತಿ, ಅಭಿಮಾನದಿಂದ ಕರೀತೀರಿ. ಇದು ನಮ್ಮ ಸಂಸ್ಕೃತಿಯ ಭಾಗವೇ ಆಗಿದೆ, ನಾಡಿನ ಭಾಗವಾಗಿದೆ. ಹಾಗಾಗಿ ಇದು ನನಗೂ ಪ್ರಿಯವಾಗಿದೆ. ನಾನು ಗೌರವಿಸುವ ಹಬ್ಬವಾಗಿದೆ. ಪ್ರೀತಿಯಿಂದ ಭಾಗಿಯಾಗುವ ಹಬ್ಬವಾಗಿದೆ. ನಾನು ತಂದೆ ತಾಯಿ ಜೊತೆ ಹಲವು ಬಾರಿ ಜಂಬು ಸವಾರಿ ನೋಡಲು ಹೋಗ್ತಿದ್ದೆ. ಈಗ ನಾನೇ ದಸರಾ ಉದ್ಘಾಟನೆ ಸಂದರ್ಭದ ಆಹ್ವಾನ ಬಂದಿದೆ. ನನಗೆ ಸಂತೋಷವಾಗಿದೆ.
ಬಾನು ಮುಷ್ತಾಕ್, ಹಿರಿಯ ಸಾಹಿತಿ
ನಾಡಹಬ್ಬ ದಸರೆ ದಿನದಿಂದ ದಿನಕ್ಕೆ ಕಳೆಗಟ್ಟುತ್ತಿದೆ. ಇವತ್ತು ಗಜಪಡೆಗೆ ರಾಜವಂಶಸ್ಥ ಯದುವೀರ್ ಒಡೆಯರ್ ಸೆಲ್ಯೂಟ್ ಹೊಡೆದ್ರು. ಗಜಪಡೆ ತಾಲೀಮಿಗೆ ತೆರಳುವ ಮುನ್ನ ಗೌರವ ಸಲ್ಲಿಸಿದ್ರು. ಈ ವೇಳೆ, ಕ್ಯಾ.ಅಭಿಮನ್ಯು ನೇತೃತ್ವದ ತಂಡ ಪ್ರತಿ ನಮಸ್ಕಾರ ಸಲ್ಲಿಸಿತು.
ಇದನ್ನೂ ಓದಿ: ಮೈಸೂರು ದಸರಾ ಉದ್ಘಾಟಕರಾಗಿ ಸಾಹಿತಿ ಭಾನು ಮುಷ್ತಾಕ್ ಆಯ್ಕೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ