/newsfirstlive-kannada/media/media_files/2025/09/12/mysore-hospital-2025-09-12-10-11-59.jpg)
ಇತ್ತೀಚೆಗೆ ಮಾನವೀಯತೆ ಸತ್ತಂತೆ ಕಾಣಿಸ್ತಿದೆ.. ಎಲ್ಲಿಗೆ ಹೋದ್ರೂ ಧನದಾಹ.. ಅಂದು ಗೌತಮ ಬುದ್ಧ ಸಾವಿಲ್ಲದ ಮನೆಯಲ್ಲಿ ಸಾಸಿವೆ ತರುವಂತೆ ಹೇಳಿದ್ದ.. ಆದ್ರೆ ಇಲ್ಲೊಬ್ಬಳು ಮಹಾತಾಯಿ ಮಗುವಿನ ಮೃತದೇಹ ಊರಿಗೆ ತರಲು ಮನೆ ಮನೆಗಳಿಗೆ ತೆರಳಿ ಭಿಕ್ಷೆ ಬೇಡಿದ್ದಾಳೆ.. ಅಂಗಲಾಚಿದ್ದಾಳೆ.. ಮನುಷ್ಯತ್ವ ಮರೆತ ವೈದ್ಯರು ಮೃಗಕ್ಕಿಂತ ಕೀಳಾಗಿ ವರ್ತಿಸಿದ್ದಾರೆ.
ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹೆಡೆತಲೇ ಗ್ರಾಮದಲ್ಲಿ ಮನಕಲಕುವ ಘಟನೆ ನಡೆದಿದೆ. ವೈದ್ಯೋ ನಾರಾಯಣೋ ಹರಿ ಅಂತಾರೆ... ಆದ್ರೆ, ಕೆಲವು ಧನದಾಹಿ ವೈದ್ಯರು, ಖಾಸಗಿ ಕ್ಲಿನಿಕ್ಗಳಿಂದ ಇದಕ್ಕೆ ಅಪವಾದ ಅಂಟತೊಡಗಿದೆ. ಅದರಲ್ಲೂ ಸಿಎಂ ತವರು ಮೈಸೂರು ಜಿಲ್ಲೆಯ ಈ ಘಟನೆ ನಿಜಕ್ಕೂ ಮನಕಲಕುವಂತಿದೆ.
ಇದನ್ನೂ ಓದಿ:ನಮ್ಮ ಮೆಟ್ರೋದಲ್ಲಿ ಜೀವಂತ ಹೃದಯ ಸಾಗಾಟ.. ವೈದ್ಯರ ರೋಚಕ ಕಾರ್ಯಾಚರಣೆ
ಮೊನ್ನೆ ಮಂಗಳವಾರ ಸಂಜೆ ನಂಜನಗೂಡು ತಾಲೂಕಿನ ಬದನವಾಳು ಗ್ರಾಮದ ಚಾಮರಾಜನಗರ-ನಂಜನಗೂಡು ಹೈವೇಯಲ್ಲಿ ಎರಡು ಬೈಕ್ಗಳ ನಡುವೆ ಭೀಕರ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಹೆಮ್ಮರಗಾಲ ಗ್ರಾಮದ ಮೂವರಿಗೆ ಹಾಗೂ ಹೆಡತಲೆ ಗ್ರಾಮದ ಮಹೇಶ್, ರಾಣಿ ದಂಪತಿ ಸೇರಿ ಮಗುವಿಗೂ ಗಂಭೀರ ಗಾಯವಾಗಿತ್ತು.. ಬಳಿಕ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆದ್ರೆ, ಚಿಕಿತ್ಸೆ ಫಲಿಸದೇ ಐದು ವರ್ಷದ ಆದ್ಯ ಎಂಬ ಮಗು ಸಾವನ್ನಪ್ಪಿದೆ. ಮಗುವಿನ ತಂದೆ ತಾಯಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ:ಅಮೆರಿಕದಲ್ಲಿ ಕರ್ನಾಟಕ ಮೂಲದ ವ್ಯಕ್ತಿಯ ತಲೆ ಕಡಿದು ವಿಕೃತಿ
ಇತ್ತ ಮಗು ಮೃತಪಟ್ಟಿದ್ದು ಆಸ್ಪತ್ರೆ ಸಿಬ್ಬಂದಿ ಶವ ಡಿಸ್ಚಾರ್ಜ್ ಮಾಡಲು ಒಂದೂವರೆ ಲಕ್ಷ ಹಣಕ್ಕೆ ತಾಕೀತು ಮಾಡಿದ್ದಾರೆ. ಅಷ್ಟೊಂದು ಹಣವನ್ನು ಕಟ್ಟಲಾಗದ ಬಡ ಕುಟುಂಬ ತಮ್ಮ ಗ್ರಾಮಕ್ಕೆ ಬಂದು ಮನೆ ಮನೆಗಳಿಗೆ ತೆರಳಿದ ಮಗುವಿನ ದೊಡ್ಡಮ್ಮ ಮಂಗಳಮ್ಮ ಸೆರಗೊಡ್ಡಿ ಭಿಕ್ಷೆ ಬೇಡಿದ್ದಾರೆ. ಮಹಿಳೆ ಭಿಕ್ಷೆ ಬೇಡುತ್ತಿರುವ ಕಂಡು ಮಮ್ಮಲ ಮರುಗಿದ ಗ್ರಾಮಸ್ಥರು ನೊಂದ ಕುಟುಂಬಕ್ಕೆ ಸುಮಾರು 80 ಸಾವಿರ ಹಣವನ್ನು ಸಂಗ್ರಹಿಸಿ ಕೊಟ್ಟಿದ್ದಾರೆ.. ಇತ್ತ ಮಾನವೀಯತೆ ಇಲ್ಲದ ಖಾಸಗಿ ಆಸ್ಪತ್ರೆ ಎದುರು ಜಮಾವಣೆಗೊಂಡ ಗ್ರಾಮಸ್ಥರು ಸಾವಿನಲ್ಲೂ ಸುಲಿಗೆ ಮಾಡುತ್ತಿರುವ ಈ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿ ಪ್ರಸಾರ ಆಗ್ತಿದ್ದೇ ತಡ ಎಚ್ಚೆತ್ತ ಆಸ್ಪತ್ರೆ ಸಿಬ್ಬಂದಿ, ಮಗುವಿಗೆ ಸಾಕಷ್ಟು ಚಿಕಿತ್ಸೆ ನೀಡಿದ್ದೇವೆ. ಆ ಬಡ ಕುಟುಂಬದ ಆರ್ಥಿಕ ಪರಿಸ್ಥಿತಿ ನಮಗೆ ಗೊತ್ತಿರಲಿಲ್ಲ. ನಾವೇನು ಸುಲಿಗೆ ಮಾಡುತ್ತಿಲ್ಲ. ಆಸ್ಪತ್ರೆ ಕಡೆಯಿಂದ ಎಷ್ಟು ಕಡಿಮೆ ಆಗುತ್ತೋ ಅಷ್ಟು ಮಾಡ್ತೀವಿ ಎಂದಿದ್ದಾರೆ.
ಇದನ್ನೂ ಓದಿ:ಹಸುಗೂಸಿಗೆ ಪುನರ್ಜನ್ಮ.. ಆ್ಯಂಬುಲೆನ್ಸ್ನಲ್ಲಿ ನಡೀತು ದೊಡ್ಡ ಪವಾಡ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ