/newsfirstlive-kannada/media/media_files/2025/09/07/kv-prabhakara-7-2025-09-07-12-46-16.jpg)
ಬೆಂಗಳೂರು7: ಮನೆಯೇ ಮೊದಲ ಶಾಲೆ ಎನ್ನುವುದು ಹೋಗಿ ಮೊಬೈಲೇ ಮೊದಲ ಶಾಲೆಯಂತಾಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ನುಡಿದರು.
ಪ್ರೆಸ್ ಕ್ಲಬ್ ಮತ್ತು ಬಾಲ ಭವನ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ‘ಮಕ್ಕಳ ಜಾತ್ರೆ’ ಸಾಂಸ್ಕೃತಿಕ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದರು.
ನಗರಗಳಲ್ಲಿ ಇರುವ ಮಕ್ಕಳು ಮಣ್ಣಿನಿಂದ ಬೇರ್ಪಟ್ಟು, ನೆಲದ ಆಟ ಪಾಠಗಳಿಂದ ದೂರ ಆಗಿದ್ದಾರೆ. ವೃದ್ದಾಶ್ರಮಗಳು ಹೆಚ್ಚಾಗುತ್ತಾ ಅಜ್ಜ-ಅಜ್ಜಿ ಕತೆಗಳಿಂದ ಮಕ್ಕಳು ವಂಚಿತರಾಗುತ್ತಿದ್ದಾರೆ. ಜೊತೆಗೆ ತಮ್ಮ ಆಟದ ಸಾಮಾನುಗಳನ್ನು ತಾವೇ ಸೃಷ್ಟಿಸಿಕೊಳ್ಳುವ ಕ್ರಿಯಾಶೀಲತೆಯೂ ಕಾಣೆಯಾಗಿ, ಪ್ಲಾಸ್ಟಿಕ್ ಆಟದ ಸಾಮಾನುಗಳು, ಬ್ಯಾಟರಿ ಚಾಲಿತ ಆಟದ ಸಾಮಾನುಗಳ ಸಹವಾಸದಲ್ಲಿ ಮಕ್ಕಳ ಮನೋಲೋಕ ಹಿಗ್ಗುವ ಬದಲಿಗೆ ಕುರುಡಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇದನ್ನೂ ಓದಿ:ರಕ್ತ ಚಂದ್ರ ಗ್ರಹಣದ ಬಗ್ಗೆ ವಿಜ್ಞಾನಿ BR ಗುರುಪ್ರಸಾದ್ ಹೇಳೋದು ಏನು..?
ಮಕ್ಕಳ ತಲೆಗಳೊಳಗೆ ರಾಗಿರೊಟ್ಟಿ ಬದಲಿಗೆ ಬರ್ಗರ್, ಜೋಳದ ರೊಟ್ಟಿ ಬದಲಿಗೆ ಪಿಜ್ಜಾ, ಮುದ್ದೆ ಬದಲಿಗೆ ಪಾಸ್ತಾ, ಡೋನಟ್ ತುಂಬಿದ್ದು ಕೂಡ ಕೆಟ್ಟ ಸಾಂಸ್ಕೃತಿಕ ರಾಜಕಾರಣ. ಇದನ್ನು ಬಹಳ ಆಳವಾಗಿ ಮತ್ತು ಗಂಭೀರವಾಗಿ ಯೋಚಿಸುವ ಅಗತ್ಯವಿದೆ.
ಇದನ್ನು ಜವಾಹರಲಾಲ್ ನೆಹರೂ ಅವರು ಮನಗಂಡಿದ್ದರು. ಮಕ್ಕಳ ದೃಷ್ಟಿಕೋನದಲ್ಲಿ ದೇಶದ ಅಭಿವೃದ್ಧಿ ಮತ್ತು ಪ್ರಗತಿಯ ನೀಲನಕ್ಷೆ ನೆಹರೂ ಅವರು ಸಿದ್ದಪಡಿಸಿದ್ದರು. ಈ ನೀಲನಕ್ಷೆಯ ಭಾಗವೇ ಜವಾಹರ ಬಾಲ ಭವನ.
ಕುಟುಂಬ, ಸಮಾಜ, ಸ್ನೇಹಿತರಿಂದ ಬೇರ್ಪಡಿಸುವ ವಿಡಿಯೊಗೇಮ್ ಗಳು ಹಿಂಸಾತ್ಮಕ ಮನೋಭಾವ, ಕೋಪ, ಅಸಹನೆ, ಆಕ್ರಮಣಶೀಲತೆಯನ್ನು ತುರುಕುತ್ತವೆ. ಇಂಥಾ ಮನಸ್ಥಿತಿಯ ಮಕ್ಕಳು ಭವಿಷ್ಯದಲ್ಲಿ ಹೇಗೆ ರೂಪುಗೊಳ್ಳಲು ಸಾಧ್ಯ? ಹೈಸ್ಕೂಲು ಮಟ್ಟದಲ್ಲೇ Ragging ಪಿಡುಗು ಹೆಚ್ಚಾಗುತ್ತಿರುವುದಕ್ಕೆ ಏನು ಕಾರಣ ಎನ್ನುವುದನ್ನು ನಾವು ಆಲೋಚಿಸಬೇಕಿದೆ ಎಂದರು.
ನೆಹರೂ ಅವರು, ‘ಮಕ್ಕಳು ತೋಟದಲ್ಲಿರುವ ಮೊಗ್ಗುಗಳಂತೆ, ಈ ಮೊಗ್ಗುಗಳನ್ನು ಎಚ್ಚರಿಕೆಯಿಂದ ಪ್ರೀತಿಯಿಂದ ಪೋಷಿಸಬೇಕು, ಆಗಷ್ಟೆ ಜವಾಬ್ದಾರಿಯುತ ನಾಗರಿಕರು ರೂಪುಗೊಳ್ಳುತ್ತಾರೆ’ ಎನ್ನುವ ಸ್ಪಷ್ಟವಾದ ವೈಜ್ಞಾನಿಕ ತಿಳಿವಳಿಕೆ ಮತ್ತು ದೂರ ದೃಷ್ಟಿ ಹೊಂದಿದ್ದರು.
ಇದನ್ನೂ ಓದಿ:ಶಿವಮೊಗ್ಗ ಜೈಲು ಸೇರಿದ ಬುರುಡೆ ಚೆನ್ನಯ್ಯ.. ಕಾರಾಗೃಹಕ್ಕೆ ಬರುತ್ತಿದ್ದಂತೆಯೇ ಕಣ್ಣೀರು..
ಈ ದೂರದೃಷ್ಟಿಯಿಂದ ಬಾಲಭವನ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಬಿ.ಆರ್.ನಾಯ್ಡು ಅವರು ಬಾಲಭವನದ ಅಧ್ಯಕ್ಷರಾಗುವುದಕ್ಕೂ ಮೊದಲು ನನಗೂ ಬಾಲಭವನದ ಸಾಧ್ಯತೆಗಳು ಮತ್ತು ಅವಕಾಶಗಳ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ಈಗ ಬಾಲ ಭವನದ ಜೊತೆಗೆ ಪ್ರೆಸ್ ಕ್ಲಬ್ ಕೂಡ ಕೈ ಜೋಡಿಸಿ ಪತ್ರಕರ್ತರ ಮಕ್ಕಳಿಗೆ ಅವರೊಳಗಿನ ಕ್ರಿಯಾಶೀಲತೆ ಅರಳಲು, ಮನೋಲೋಕ ವಿಸ್ತಾರಗೊಳ್ಳಲು ಮುಂದಾಗಿರುವುದು ಆರೋಗ್ಯಕಾರಿ ಬೆಳವಣಿಗೆ ಎಂದು ಶ್ಲಾಘಿಸಿದರು.
ನಟರೂ, ಕಲಾವಿದರಾಲೂ ಆದ ಅರುಣ್ ಸಾಗರ್ ಮತ್ತು ಮೀರಾ ದಂಪತಿ, ಬಾಲ ಭವನ ಅಧ್ಯಕ್ಷರಾದ ಬಿ.ಆರ್.ನಾಯ್ಡು ಸೇರಿ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ:ಬುರುಡೆ ರಹಸ್ಯ ಬಯಲು.. ಗುಡ್ಡದಿಂದ ಬರುಡೆ ತಂದಿದ್ದು ಸೌಜನ್ಯಾಳ ಮಾವ ಮತ್ತು..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ