/newsfirstlive-kannada/media/media_files/2025/10/31/bhuvanagiri-bhuvaneshwari-2025-10-31-18-27-25.jpg)
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭುವನಗಿರಿಯಲ್ಲಿ ನೆಲೆಸಿದ್ದಾಳೆ ತಾಯಿ ಭುವನೇಶ್ವರಿ. ನಾಡಿಗೊಂದು ಅಧಿದೇವತೆ, ಭಾಷೆಗೊಂದು ಸುಂದರ ಲಾಂಛನವನ್ನು ಹೊಂದಿರುವ ಅಪರೂಪದ ಭಾಷೆ ಕನ್ನಡ. ಕನ್ನಡಿಗರೆಲ್ಲ ಹೆಮ್ಮೆಪಡಬಹುದಾದ ವಿಷಯ. ಕನ್ನಡ ಭಾಷೆಯ ನೆಲ, ಜಲ, ನುಡಿಗಾಗಿ ಕದಂಬರ ಅರಸ ವೀರ ಮಯೂರನಿಂದಾಗಿ ಸ್ವಾಭಿಮಾನಿ ರಾಜ್ಯ ನಿರ್ಮಾಣವೇ ನಡೆದು ಹೋದ ಅಪರೂಪದ ಇತಿಹಾಸ ಕನ್ನಡ ನಾಡಿನದ್ದು. ಇಂತಹ ಹೆಮ್ಮೆಯ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿ ನಿಂತಿದೆ ಉತ್ತರ ಕನ್ನಡ ಜಿಲ್ಲೆ. ಇಂದಿಗೂ ಈ ನೆಲ ಕನ್ನಡದ ಕುಲದೇವಿಯನ್ನ ಮಡಿಲಲ್ಲಿಟ್ಟುಕೊಂಡು, ಕನ್ನಡತನವನ್ನ ಎದೆಯ ಗುಂಡಿಗೆಯಲ್ಲಿ ತುಂಬಿಟ್ಟು ಉಸಿರಾಡುತ್ತಿದೆ. ತಾಯಿ ಭುವನೇಶ್ವರಿ ದೇವಿ ನೆಲೆನಿಂತಿರುವ, ಕನ್ನಡ ಸಾಮ್ರಾಜ್ಯ ಕಟ್ಟಲ್ಪಟ್ಟ ಕನ್ನಡಿಗರ ಇತಿಹಾಸ ಕಾಶಿಯಿದು. ಇಂತಹ ನೆಲವಾದ ಉತ್ತರ ಕನ್ನಡದ ಸಿದ್ದಾಪುರದಿಂದ ಕುಮಟಾ ರಸ್ತೆಯಲ್ಲಿ ಎಂಟು ಕಿಲೋಮೀಟರ್ ದೂರವಿರುವ ಭುವನಗಿರಿ ಕನ್ನಡಿಗರ ಸಿರಿಯನ್ನು ಶಿರದಲ್ಲಿ ಹೊತ್ತು ನಿಂತ ನೆಲ. ಅಪ್ಪಟ ಮಲೆನಾಡ ಹಸಿರು ಸೊಬಗಿನ ನಡುವೆ ಕನ್ನಡಿಗರೊಡತಿ ತಾಯಿ ಭುವನೇಶ್ವರೀ ದೇವಿ ನೆಲೆನಿಂತಿದ್ದಾಳೆ. ದಟ್ಟ ಹಸಿರು ಬೆಟ್ಟದ ಮೇಲೆ ಕುಳಿತು ಕನ್ನಡಿಗರನ್ನು ಹರಸುತ್ತಿದ್ದಾಳೆ.
/filters:format(webp)/newsfirstlive-kannada/media/media_files/2025/10/31/bhuvanagiri-bhuvaneshwari-1-2025-10-31-18-28-38.jpg)
ಮೂರು ಶತಮಾನಗಳಿಗೂ ಮೊದಲೇ ಬಿಳಗಿಯ ಅರಸರು ತಾಯಿ ಭುವನೇಶ್ವರಿ ದೇವಿಯ ದೇಗುಲ ನಿರ್ಮಾಣದ ಮೂಲಕ ಕನ್ನಡತಿಯ ತೇರನ್ನು ಎಳೆದಿದ್ದರು. ತಾಯ್ನುಡಿಯ ಪೂಜೆಗೆ ಅಧಿಕೃತ ಮುನ್ನುಡಿ ಬರೆದಿದ್ದರು. ವಿಜಯನಗರದ ಅರಸರು ಸಹ ಮಾತೆ ಭುವನೇಶ್ವರಿಗೆ ವಂದಿಸಿಯೇ ತಮ್ಮ ಕೆಲಸ ಕಾರ್ಯಗಳನ್ನು ಆರಂಭಿಸುತ್ತಿದ್ದರು. ಈ ಕಾರಣಕ್ಕಾಗಿ ಹಂಪಿಯ ವಿರೂಪಾಕ್ಷ ದೇವಾಲಯದಲ್ಲಿ ಭುವನೇಶ್ವರಿ ವಿಗ್ರಹವನ್ನು ಕಾಣಬಹುದಾಗಿದೆ. ಈ ದೇವಾಲಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ.
ಇದನ್ನೂ ಓದಿ: ಕನ್ನಡದ ಏಕೈಕ 365 ದಿನವೂ ಆರಾಧಿಸಲ್ಪಡುವ ಕನ್ನಡಾಂಬೆ ‘ಭುವನಗಿರಿಯ ಭುವನೇಶ್ವರಿ’ ಬಗ್ಗೆ ನಿಮಗೆಷ್ಟು ಗೊತ್ತು..?
/filters:format(webp)/newsfirstlive-kannada/media/media_files/2025/10/31/bhuvanagiri-bhuvaneshwari-2-2025-10-31-18-28-54.jpg)
ಆದರೆ ಹದಿನೇಳನೆಯ ಶತಮಾನದವರೆಗಿನ ದಾಖಲೆಗಳು ಲಭ್ಯವಿಲ್ಲ. ಮದ್ರಾಸ್ ರೆಸಿಡೆನ್ಸಿಗೆ ಸೇರಿದ್ದ ದಾಖಲೆಯ ಕಡತಗಳು ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕ್ರಿ.ಶ. 1600ರ ನಂತರದ ಇತಿಹಾಸವಿದೆ ಎನ್ನಲಾಗಿದೆ. ಕದಂಬರು ಕನ್ನಡ ಭಾಷೆಯನ್ನು ಹಾಗು ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಬಳಸಿದವರಲ್ಲಿ ಮೊದಲಿಗರು. ಇವರ ಆಡಳಿತ ಕಾಲಮಾನದಲ್ಲಿ ಕಲೆ ಹಾಗು ಸಂಸ್ಕ್ರತಿಗೆ ಬಹಳ ಮಹತ್ವವನ್ನು ನೀಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಭುವನಗಿರಿ ಕೇವಲ ಧಾರ್ಮಿಕ ಸ್ಥಳವಲ್ಲದೆ ಕನ್ನಡದ ಗೌರವದ ಪ್ರತೀಕವಾಗಿದೆ.
/filters:format(webp)/newsfirstlive-kannada/media/media_files/2025/10/31/bhuvanagiri-bhuvaneshwari-3-2025-10-31-18-29-21.jpg)
ಭುವನಗಿರಿ ದೇವಾಲಯವು ಸುಮಾರು 300 ಅಡಿ ಎತ್ತರರ ಪ್ರದೇಶದಲ್ಲಿದ್ದು ಸುಮಾರು 350 ಮೆಟ್ಟಿಲುಗಳನ್ನು ಏರಿ ತಲುಪಬೇಕಾಗಿದೆ. ಸ್ಥಳೀಯ ಜನಪದ ಕಥೆಗಳ ಪ್ರಕಾರ ಹಿಂದಿನ ಕಾಲದಲ್ಲಿ ‘ಭುವನೇಶ್ವರಿ ಪರ್ವತʼ ಎಂದು ಕರೆಯಲ್ಪಡುತ್ತಿತ್ತು. ತದನಂತರದಲ್ಲಿ ಭುವನಗಿರಿಯಾಗಿ ಪ್ರಸಿದ್ಧಿಯನ್ನು ಪಡೆದಿದೆ. ಭುವನಗಿರಿ ದೇವಾಲಯದ ನಿರ್ಮಾಣ ಶೈಲಿಯು ಕದಂಬ ಹಾಗು ಚಾಲುಕ್ಯರ ಶಿಲ್ಪಕಲೆಗಳ ರೀತಿಯಲ್ಲಿದ್ದು, ಗರ್ಭಗುಡಿಯಲ್ಲಿರುವ ದೇವಿಯ ವಿಗ್ರಹದ ಕೆತ್ತನೆಯ ಶೈಲಿಯು ಇದಕ್ಕೆ ಸಾಕ್ಷಿಯಾಗಿದೆ. ದೇವಾಲಯದ ತಳಹದಿಯಲ್ಲಿ ಕಾಣುವ ಕೆಲವು ಶಿಲಾಶಾಸನಗಳು ಹಳೆಯ ಯುಗದ ಕನ್ನಡ ಲಿಪಿಯೆಂದು ಹಾಗು ಕದಂಬರ ಕಾಲದ ಶಾಸನಗಳೆಂದು ಇತಿಹಾಸಕಾರರು ಉಲ್ಲೇಖಿಸಿದ್ದಾರೆ. ಹಾಗೆಯೆ ಪುನರ್ನಿರ್ಮಾಣವನ್ನು ಬಿಳಗಿಯ ಅರಸರು ಹಾಗು ಸ್ಥಳೀಯ ರಾಜರ ಸಹಾಯದಿಂದ ನಡೆಯಿತೆಂಬ ಮಾತುಗಳಿವೆ. ವಿಜಯನಗರದ ಅರಸರ ಕಾಲದಿಂದಲೂ ಈ ಸ್ಥಳ ದಾಮಿ೯ಕ ಹಾಗು ಸಾಂಸ್ಕ್ರತಿಕ ಕೇಂದ್ರವಾಗಿತ್ತು ಎಂಬ ಸಾಕ್ಷಗಳು ದೊರೆತಿವೆ.
/filters:format(webp)/newsfirstlive-kannada/media/post_attachments/wp-content/uploads/2023/11/BHUVANAGIRI-1.jpg)
ಭುವನಗಿರಿಯ ಸುತ್ತಮುತ್ತಲಿನ ಜನರು ಹಾಗೂ ಭಕ್ತರು ಸೇರಿ ಪ್ರತಿವರ್ಷ ಭುವನಗಿರಿಯ ಜಾತ್ರೆ, ನಾಗರ ಪಂಚಮಿ, ಕಾರ್ತಿಕ ದೀಪೋತ್ಸವ ನಡೆಸಿಕೊಂಡು ಬರುತ್ತಿದ್ದು, ಜನರ ಭಕ್ತಿ-ಭಾವ ಮತ್ತು ಏಕತೆಯನ್ನು ಸಾರುತ್ತದೆ. ನವೆಂಬರ 1ರಂದು ಭುವನಗಿರಿ ಶಿಖರದ ಮೇಲಿನಿಂದ ನಡೆಸಲ್ಪಡುವ ಕನ್ನಡದ ಧ್ವಜಾರೋಹಣವು ಒಂದು ಶತಮಾನದ ಇತಿಹಾಸ ಹೊಂದಿದೆ. ಕನ್ನಡ ಭಾಷೆಯ ಪ್ರೇಮ, ಕನ್ನಡಿಗರ ಸ್ವಾಭಿಮಾನ, ಹೋರಾಟಗಾರರ ತ್ಯಾಗ ಬಲಿದಾನಗಳಿಗೆ ಪ್ರೇರಣೆ ನೀಡಿದ ಉತ್ಸವವಾಗಿ ನಡೆದುಕೊಂಡು ಬರುತ್ತಿದೆ. ಪ್ರಥಮ ಪೂಜೆಯನ್ನು ಭುವನೇಶ್ವರಿಗೆ ಸಲ್ಲಿಸಿದ ನಂತರ ಹಲವು ಕನ್ನಡ ಪರ ಸಂಘಟನೆಗಳಿಂದ, ಸ್ಥಳೀಯರಿಂದ, ಗ್ರಾಮಸ್ಥರಿಂದ ಕೂಡಿಕೊಂಡು ಧ್ವಜಾರೋಹಣವು ನಡೆಯುತ್ತದೆ.
ಇದನ್ನೂ ಓದಿ: ಅಪ್ರಾಪ್ತ ವಯಸ್ಸಿನಲ್ಲಿ ಪ್ರೀತಿಯಲ್ಲಿ ಬಿದ್ದ ಮಗಳು : ಬುದ್ದಿವಾದ ಹೇಳಿದ್ದಕ್ಕೆ ಹೆತ್ತ ತಾಯಿಯನ್ನೇ ಕೊಂದ ಮಗಳು!
/filters:format(webp)/newsfirstlive-kannada/media/post_attachments/wp-content/uploads/2023/11/BHUVANAGIRI-2.jpg)
ಅನಂತರ ದೇವಾಲಯದ ಆವರಣದಲ್ಲಿ ಶ್ಲೋಕ ಪಠಣ, ಭಜನೆ, ನಾಟಕ ಯಕ್ಷಗಾನದ ನಿರೂಪಣೆಗಳು ಹಾಗು ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಈ ಸಂದರ್ಭದಲ್ಲಿ ರಾಜಕಿಯ ಪಕ್ಷಗಳು , ಸ್ಥಳೀಯ ಸಂಘಟನೆಗಳು , ಶಾಲಾ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಾರೆ. ಕರ್ನಾಟಕ ರಾಜ್ಯ ರಚನೆ ಹಾಗೂ ರಾಜ್ಯೋತ್ಸವದ ಆಚರಣೆ 1956 ರಿಂದ ಪ್ರಾರಂಭಿತವಾದರೂ ರಾಜ್ಯಕ್ಕಾಗಲಿ, ರಾಜಧಾನಿಗಾಗಲಿ ಭುವನಗಿರಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಬೇಕೆಂಬ ಮನಸ್ಸಾಗಿದ್ದು ಮಾತ್ರ ಇತ್ತಿಚಿನ ದಿನಗಳಲ್ಲಿ. 1980ರಲ್ಲಿ ಸ್ಥಳೀಯ ಯುವಕ ಸಂಘಗಳು ಹಾಗು ಸಾಂಸ್ಕೃತಿಕ ಸಂಘಟನೆಗಳು ಸೇರಿಕೊಂಡು ಭುವನಗಿರಿಯ ಕನ್ನಡ ರಾಜ್ಯೋತ್ಸವ ಸಮಿತಿಯನ್ನು ರಚಿಸಿ, ಆ ವರ್ಷದಲ್ಲಿ ಭುವನೇಶ್ವರಿ ದೇವಿಯ ಆಲಯದಲ್ಲಿ ಧ್ವಜಾರೋಹಣ ನಡೆಸಿದರು. ನಂತರ ವರ್ಷದಿಂದ ವರ್ಷಕ್ಕೆ ದೊಡ್ಡ ಹಬ್ಬದ ರೂಪವನ್ನು ಪಡೆದಿದೆ.
ಇದನ್ನೂ ಓದಿ: ಕೊನೆಗೂ ಕನ್ನಡ ರಾಜ್ಯೋತ್ಸವ ಆಚರಣೆಗೆ ಒಪ್ಪಿದ ಬಿಎಚ್‌ಇಎಲ್ : ಕನ್ನಡ ಅಭಿವೃದ್ದಿ ಪ್ರಾಧಿಕಾರದ ಆಗ್ರಹಕ್ಕೆ ಮಣಿದ ಸಂಸ್ಥೆ
/filters:format(webp)/newsfirstlive-kannada/media/post_attachments/wp-content/uploads/2023/11/BHUVANAGIRI.jpg)
ಭುವನಗಿರಿಯ ಹಿರಿಮೆಯು ಗಗನದೆತ್ತರಕ್ಕಿದ್ದರೂ ಕೂಡ ಅದರ ಮೂಲ ಸೌಕರ್ಯದ ಕೊರತೆಯಿಂದಾಗಿ, ಪ್ರವಾಸೋದ್ಯಮ ಹಾಗು ಸರ್ಕಾರದ ನಿರ್ಲಕ್ಷ್ಯದಿಂದಾಗಿ ಹಿರಿಮೆಯ ಗರಿಮೆ ಕಿರಿದಾಗುತ್ತಾ ಹೋಗುತ್ತಿದೆ. ಪರ್ವತದ ಮೆಟ್ಟಿಲು ಹಳಿಯು ಕಲ್ಲಿನಿಂದ ನಿರ್ಮಿತವಾಗಿದ್ದು ಹಲವು ಕಡೆ ಕುಸಿತದ ಭೀತಿಯಿದೆ. ಹಿರಿಯರು ಮತ್ತು ಮಕ್ಕಳು ಮೆಟ್ಟಿಲು ಏರುವಾಗ ಸುರಕ್ಷತೆಗಾಗಿ ಹಿಡಿಯುವ ರೇಲಿಂಗಗಳ ಕೊರತೆಯಿದೆ. ಮಳೆಗಾಲದಲ್ಲಿ ಮೆಟ್ಟಿಲಿನ ಮೇಲಿಂದ ಜಾರಿ ಬೀಳುವ ಸಂಭವಗಳು ಜಾಸ್ತಿಯಿರುತ್ತದೆ.
ಸಿದ್ದಾಪುರದಿಂದ ಭುವನಗಿರಿಗೆ ಹೋಗುವ ರಸ್ತೆಯು ಸಂಪೂರ್ಣ ಹಾಳಾಗಿದ್ದು ಸಂಚಾರವು ಅಸ್ತವ್ಯಸ್ತವಾಗಿದೆ. ಮುಖ್ಯವಾಗಿ ಸರ್ಕಾರವು ಕನ್ನಡ ರಾಜ್ಯೋತ್ಸವದ ಹೊರತಾಗಿ ಭುವನಗಿರಿಗೆ ಅಧಿಕೃತ ಮಟ್ಟದ ಕಾರ್ಯಕ್ರಮಗಳು ಅಥವಾ ನಿಧಿ ವಿನಿಯೋಗಗಳಿಗೆ ಪೂರಕ ಪ್ರಮಾಣದಲ್ಲಿ ಅನುದಾನಗಳು ಹಾಗು ದೇವಾಲಯದ ಜೀರ್ಣೋದ್ಧಾರಕ್ಕೆ ಸಹಾಯ ನೀಡದಿರುವುದು ಸ್ಥಳೀಯರಿಗೆ ಬೇಸರಕ್ಕೆ ಕಾರಣವಾಗಿದೆ. ಇದನ್ನು ಸಂರಕ್ಷಿಸಬೇಕಾಗಿದ್ದ ಪ್ರವಾಸೋದ್ಯಮ , ಮುಜರಾಯಿ ಇಲಾಖೆಗೆ ಇಂತಹ ಒಂದು ಕನ್ನಡದ ಏಕೈಕ ಕನ್ನಡಾಂಬೆಯ ದೇಗುಲ ಇರುವುದೇ ತಿಳಿದಿಲ್ಲವೇನೋ ಎನ್ನುವಷ್ಟರ ಮಟ್ಟಿಗೆ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.
ಕನ್ನಡದ ಮೊದಲ ಅರಸರಾದ ಕದಂಬರು ಈ ದೇವಿಯನ್ನು ಆರಾಧಿಸಿದ್ದರೆಂಬುದಕ್ಕೆ ಭುವನಗಿರಿ ಭುವನೇಶ್ವರೀ ದೇವಿಯ ದೇವಾಲಯಗಳೇ ಸಾಕ್ಷಿ. ಅದಕ್ಕಾಗಿಯೇ ಆಕೆಯನ್ನು ಕನ್ನಡದ ಕುಲದೇವಿ ಎಂದು ಕರೆದು ಗೌರವಿಸಲಾಗುತ್ತದೆ. ಒಟ್ಟಾರೆ ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿರುವ ಭುವನಗಿರಿಯೆಡೆ ಕನ್ನಡಿಗರ ಆಸಕ್ತಿ ಬೆಳೆಯಬೇಕಿದೆ. ಸರ್ಕಾರ ಕನ್ನಡ ರಾಜ್ಯೋತ್ಸವದಂದು ರಾಜ್ಯೋತ್ಸವ ಪ್ರಶಸ್ತಿಯನ್ನ ತಾಯಿಯ ಸನ್ನಿಧಿಯಲ್ಲಿ ನೀಡುವಂತಾಗಬೇಕಿದೆ. ಕನ್ನಡ ನಾಡು, ನುಡಿಯ ಸಂಕೇತವಾದ ಭುವನಗಿರಿಯನ್ನು ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ಯಲು ಪ್ರತಿಯೊಬ್ಬ ಕನ್ನಡಿಗ ಪಣ ತೊಡುವಂತಾಗಲಿ ಅನ್ನೊಂದೆ ನಮ್ಮ ಆಶಯ.
ವಿಶೇಷ ವರದಿ: ✍ ಶ್ರೀಧರ್ ಜಿ.ಎಚ್, ನ್ಯೂಸ್ ಫಸ್ಟ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us