/newsfirstlive-kannada/media/media_files/2025/08/18/chikkamgalore-tourist-2025-08-18-11-45-08.jpg)
ರಾಜ್ಯದಲ್ಲಿ ಮತ್ತೆ ಮಳೆರಾಯನ ಆರ್ಭಟ ಜೋರಾಗಿದೆ. ಹವಾಮಾನ ಇಲಾಖೆ ಮತ್ತೆ ಭಾರೀ ಮಳೆ ಸುರಿಯುವ ಮುನ್ಸೂಚನೆ ನೀಡಿದ್ದು, ಈಗಾಗಲೇ ಅಲ್ಲಲ್ಲಿ ಪ್ರವಾಹ ಸಂಭವಿಸಿ ಅನಾಹುತ ಸೃಷ್ಟಿಯಾಗಿದೆ. ಎಲ್ಲೆಲ್ಲಿ ಏನೆಲ್ಲ ಅನಾಹುತ ಆಗಿದೆ ಅನ್ನೋದ್ರ ವಿವರ ಇಲ್ಲಿದೆ.
ಮುಳುಗಿದ ಕಪ್ಪೆಶಂಕರನಾರಾಯಣ ದೇಗುಲ
ಚಿಕ್ಕಮಗಳೂರಿನ ಶೃಂಗೇರಿ ತಾಲೂಕಿನ ಸುತ್ತಮುತ್ತ ಧಾರಾಕಾರ ಮಳೆಯಾಗ್ತಿದ್ದು, ಶೃಂಗೇರಿ ದೇಗುಲದ ಕಪ್ಪೆಶಂಕರನಾರಾಯಣ ದೇಗುಲ ಮುಳುಗಡೆಯಾಗಿದೆ. ದೇಗುಲದ ಗಾಂಧಿ ಮೈದಾನ ಸಂಪೂರ್ಣ ಜಾಲಾವೃತಗೊಂಡಿದ್ದು, ದೇವಸ್ಥಾನದ ಪಾರ್ಕಿಂಗ್ ಜಾಗದ ಮಾರ್ಗ ಪ್ಯಾರಲಲ್ ರಸ್ತೆ ಕೂಡ ಮುಳುಗಡೆಯಾಗಿದ್ದು, ಜನರ ಜೀವನ ಅಸ್ತವ್ಯಸ್ತವಾಗಿದೆ. ಕಾಫಿ-ಅಡಿಕೆ-ಮೆಣಸು ಬೆಳೆಗಾರರಿಗೆ ಕೊಳೆ ರೋಗದ ಭೀತಿ ಶುರುವಾಗಿದೆ.
ಕೆಮ್ಮಣ್ಣುಗುಂಡಿಯಲ್ಲಿ ಧರೆ ಕುಸಿತ.. ರಸ್ತೆ ಬಂದ್
ಚಿಕ್ಕಮಗಳೂರಲ್ಲಿ ಸುರಿಯುತ್ತಿರೋ ಭಾರೀ ಮಳೆಗೆ ತರೀಕೆರೆ ತಾಲೂಕಿನ ಲಿಂಗದಹಳ್ಳಿಯ ಕೆಮ್ಮಣ್ಣುಗುಂಡಿಯಲ್ಲಿ ಧರೆ ಕುಸಿತವಾಗಿದೆ. ನಿನ್ನೆಯಿಂದ ರಾತ್ರಿ ಸುರಿದ ಮಳೆಯಿಂದ ಧರೆ ಕುಸಿದು ಕಲ್ಲು ಮಣ್ಣು ಕೆಮ್ಮಣ್ಣುಗುಂಡಿಯ ರಾಜಭವನಕ್ಕೆ ಹೋಗುವ ರಸ್ತೆ ಮೇಲೆ ಬಿದ್ದಿದೆ. ಭಾರೀ ಪ್ರಮಾಣದ ಮಣ್ಣುಕುಸಿತದಿಂದ ರಾಜಭವನ ರಸ್ತೆ ಬಂದ್ ಮಾಡಲಾಗಿದೆ.
ಕೋಡಿ ಬಿದ್ದ ಅಯ್ಯನಕೆರೆ, ಪ್ರವಾಸಿಗರ ಹುಚ್ಚಾಟ
ನಿರಂತರವಾಗಿ ಸುರಿಯುತ್ತಿರೋ ಮಳೆಗೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದಲ್ಲಿರುವ ಅಯ್ಯನಕೆರೆ ಕೋಡಿ ಬಿದ್ದಿದ್ದು, ಕೆರೆ ಕೋಡಿ ಬಿದ್ದ ಜಾಗದಲ್ಲೇ ಪ್ರವಾಸಿಗರು ಹುಚ್ಚಾಟವಾಡಿದ್ದಾರೆ. ಸ್ವಲ್ಪ ಹೆಚ್ಚುಕಮ್ಮಿಯಾಗಿ ಬಿದ್ದರೂ ದೊಡ್ಡ ಅಪಾಯ ಸಂಭವಿಸೋ ಸಾಧ್ಯತೆ ಇದೆ. ಸುತ್ತಮುತ್ತಲಿನ ಜನರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.
ಕೆರೆಯಂತಾದ ರಸ್ತೆಗಳು.. ವಾಹನ ಸವಾರರ ಪರದಾಟ
ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ವರುಣ ಅಬ್ಬರಿಸಿ ಬೊಬ್ಬರಿಯುತ್ತಿದ್ದು, ಸಕಲೇಶಪುರ ಮೂಡಿಗೆರೆ ಹೆದ್ದಾರಿಯಲ್ಲಿ ಭಾರೀ ಮಳೆಗೆ ಗುಂಡಿಬಿದ್ದ ರಸ್ತೆಯಲ್ಲಿ ಸಾಗಲು ವಾಹನ ಸವಾರರು ಪರದಾಡುವಂತಾಗಿದೆ. ಮೂಡಿಗೆರೆ ತಾಲೂಕಿನಲ್ಲಿ ಗಾಳಿ ಮಳೆ ಅಬ್ಬರ ಮುಂದುವರೆದಿದ್ದು, ಮಳೆಯಿಂದ ಗುಂಡಿ ಬಿದ್ದ ರಸ್ತೆಗಳು ಕೆರೆಯಂತಾಗಿದೆ. ಪರಿಣಾಮ ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು ಪರದಾಡುವಂತಾಗಿದೆ. ಸ್ಥಳೀಯ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ:ಶ್ರೀಕೃಷ್ಣ ರಥಕ್ಕೆ ವಿದ್ಯುತ್ ಸ್ಪರ್ಶಿಸಿ ಅನಾಹುತ.. ಐವರು ದುರಂತ ಅಂತ್ಯ
ಭಾರೀ ಮಳೆ, ಕೆರೆ ಒಡೆದು ಆವಾಂತರ
ಬೀದರ್ನ ಔರಾದ್ ತಾಲೂಕಿನ ಭೋಂತಿ ನಾಮಾನಾಯಕ್ ತಾಂಡಾದ ಕೆರೆ ನಿನ್ನೆ ರಾತ್ರಿ ಒಡೆದು ದೊಡ್ಡ ಅವಾಂತರ ಸೃಷ್ಟಿಯಾಗಿದೆ. ಸುಮಾರು 40 ಎಮ್ಮೆಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು ರೈತರಿಗೆ ನಷ್ಟವಾಗಿದೆ. ನಂದಿ ಬಿಜಲಗಾಂವ್ ಗ್ರಾಮದ ರೈತರ ಜಮೀನುಗಳಿಗೆ ನೀರು ನುಗ್ಗಿದ ಪರಿಣಾಮ ಬೆಳೆಗಳು ಹಾನಿಗೊಳಗಾಗಿವೆ. ಸೋಯಾಬಿನ್, ತೋಗರಿ, ಹೆಸರು, ಉದ್ದು ಸೇರಿದಂತೆ ಹಲವು ಬೆಳೆಗಳು ನೀರು ಪಾಲಾಗಿವೆ. ಹಂಗರಗಾ- ಸಾವರಗಾಂವ್ ರಸ್ತೆಯ ಸೇತುವೆ ಕೊಚ್ಚಿ ಹೋಗಿದ್ದು, ಅಧಿಕಾರಿಗಳ ಟೀಮ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:ಜೈಲಲ್ಲಿ 4ನೇ ದಿನ ಕಳೆದ ದರ್ಶನ್ಗೆ ಹೊಸ ಟೆನ್ಷನ್..!
ಬೋರವೆಲ್‌ನಿಂದ ಉಕ್ಕಿ ಹರಿಯುತ್ತಿರೋ ನೀರು
ಧಾರಕಾರ ಮಳೆಯಿಂದಾಗಿ ಅಂತರ್ಜಲ ಹೆಚ್ಚಾಗಿದ್ದು, ಬೋರವೆಲ್ ನೀರು ತಾನಾಗಿಯೇ ಉಕ್ಕಿ ಹರಿಯುತ್ತಿದೆ. ಕಲಬುರಗಿಯ ಕಾಳಗಿ ತಾಲೂಕಿನಲ್ಲಿ ಈ ಘಟನೆ ನಡೆದಿದೆ. ಕಳೆದ ಅನೇಕ ದಿನಗಳಿಂದ ಚಿಂಚೋಳಿ ಮತ್ತು ಕಾಳಗಿ ತಾಲೂಕಿನಲ್ಲಿ ಭಾರೀ ಮಳೆ ಸುರಿಯುತ್ತಿದೆ. ಇದ್ರಿಂದಾಗಿ ಕೆರೆ ಕಟ್ಟೆಗಳು, ಹಳ್ಳ- ಕೊಳ್ಳಗಳು ತುಂಬಿ ಹರಿಯುತ್ತಿವೆ. ಕಾಗಿಣಾ ನದಿ ಕೂಡ ಮೈತುಂಬಿ ಹರಿಯುತ್ತಿದೆ. ಇನ್ನು ನಿರಂತರ ಮಳೆ ಹಿನ್ನೆಲೆ ಅಂತರ್ಜಾಲ ಹೆಚ್ಚಳವಾಗಿ ರಾಯಕೋಡ್ ಮತ್ತು ಗಡಿಕೇಶ್ವರ ಗ್ರಾಮದ ಮಧ್ಯೆ ಇರುವ ಬೋರವೆಲ್‌ನಿಂದ ನೀರು ಉಕ್ಕಿ ಹೊರಬರುತ್ತಿದೆ.
ಐತಿಹಾಸಿಕ ಸ್ಮಾರಕಗಳು ಜಲಾವೃತ
ಭಾರೀ ಮಳೆಗೆ ಕೊಪ್ಪಳದ ಐತಿಹಾಸಿಕ ಸ್ಮಾರಕಗಳು ಸಂಪೂರ್ಣವಾಗಿ ಜಲಾವೃತವಾಗಿದೆ. ಮಲೆನಾಡು ಭಾಗದಲ್ಲಿ ಧಾರಕಾರ ಮಳೆಯಾಗ್ತಿದ್ದು, ತುಂಗಭದ್ರಾ ನದಿಯಲ್ಲಿ ನಿನ್ನೆಯಿಂದ ಸುಮಾರು 85 ಸಾವಿರದಿಂದ 1 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ಒಳಹರಿವು ಹೆಚ್ಚಳವಾಗಿದೆ. ಒಳಹರಿವು ಹೆಚ್ಚಳ ಹಿನ್ನೆಲೆ ಸದ್ಯ 95 ಸಾವಿರ ಕ್ಯೂಸೆಕ್ ನೀರನ್ನ ನದಿಗೆ ಹರಿ ಬಿಡಲಾಗ್ತಿದೆ. ಪರಿಣಾಮ ಆನೆಗೊಂದಿ ಬಳಿ ಇರೋ ಶ್ರೀಕೃಷ್ಣದೇವರಾಯ ಸಮಾಧಿ ಮಂಟಪ , ಸೇರಿ ಐತಿಹಾಸಿಕ ಸ್ಮಾರಕಗಳು ಸಂಪೂರ್ಣವಾಗಿ ಜಲಾವೃತವಾಗಿದೆ. ಕೊಪ್ಪಳದ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ನದಿಪಾತ್ರದಲ್ಲಿ ಜನಜಾನುವಾರು ಹೋಗದಂತೆ ಸೂಚನೆ ನೀಡಿದ್ದಾರೆ. ಡ್ಯಾಂ ಸುರಕ್ಷತೆ ದೃಷ್ಟಿಯಿಂದ ತಜ್ಞರು ನೀಡಿದ ವರದಿ ಹಿನ್ನೆಲೆ ನೀರಿನ ಪ್ರಮಾಣ ಇಳಿಕೆ ಮಾಡಲಾಗಿದೆ.
ಇದನ್ನೂ ಓದಿ:ರಾಜ್ಯದಲ್ಲಿ ಮತ್ತೆ ಭಯಂಕರ ಮಳೆ.. ಶಾಲೆಗಳಿಗೆ ರಜೆ.. ಎಲ್ಲೆಲ್ಲಿ ಏನೆಲ್ಲ ಆಗ್ತಿದೆ..?
ಕೃಷ್ಣಾ ನದಿಯಲ್ಲಿ ಪ್ರವಾಹ; ಜಿಲ್ಲಾಡಳಿತದಿಂದ ಕಟ್ಟೆಚ್ಚರ
ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದಾಗಿ ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ದಿಢೀರನೆ ಏರಿಕೆಯಾಗಿದೆ. ನದಿಗೆ ಇಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದ್ದು, ಪರಿಸ್ಥಿತಿ ನಿಯಂತ್ರಿಸಲು ಸೂಚನೆ ನೀಡಿದೆ. ಬಸವಸಾಗರ ಜಲಾಶಯಕ್ಕೆ ಹರಿದುಬಂದ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರ್ತಿದೆ. 25 ಕ್ರಸ್ಟ್ ಗೇಟ್‌ಗಳ ಮೂಲಕ ನೀರನ್ನು ನದಿಗೆ ಬಿಡಲಾಗುತ್ತಿದ್ದು, ಜಲಾಶಯದ ನೀರಿನ ಮಟ್ಟ 491.78 ಮೀಟರ್‌ಗೆ ತಲುಪಿದೆ. 31 ಟಿಎಂಸಿ ನೀರು ಸಂಗ್ರಹವಿದ್ದು, ನಾರಾಯಣಪುರ ಎಡದಂಡೆ ಕಾಲುವೆಗೆ 3000 ಕ್ಯೂಸೆಕ್ ಹಾಗೂ ಬಲದಂಡೆ ಕಾಲುವೆಗೆ 1000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಮಳೆ ಮುಂದುವರಿದರೆ ಕೃಷ್ಣಾ ನದಿಗೆ ಇನ್ನೂ ಹೆಚ್ಚಿನ ನೀರು ಬರುವ ಸಾಧ್ಯತೆ ಇದೆ.
ಇದನ್ನೂ ಓದಿ: ಭಾರೀ ಮಳೆಯ ನಡುವೆ ಮತ್ತೆ ಎಚ್ಚರಿಕೆ.. 5 ಜಿಲ್ಲೆಗಳಿಗೆ ರೆಡ್ ಅಲರ್ಟ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ