/newsfirstlive-kannada/media/post_attachments/wp-content/uploads/2023/11/Snake-2.jpg)
ಮೂರು ನಾಗರಹಾವು ಮತ್ತು ನಾಲ್ಕು ಹೆಬ್ಬಾವುಗಳನ್ನು ಅಕ್ರಮವಾಗಿ ಹಿಡಿದಿಟ್ಟು ಕಳ್ಳಸಾಗಾಣಿಕೆ ಮಾಡಲು ಪ್ರಯತ್ನಿಸುತ್ತಿದ್ದ ಮೂವರನ್ನು ಉತ್ತರ ಪ್ರದೇಶದ ಮಥುರಾ ಪೊಲೀಸರು ಬಂಧಿಸಿದ್ದಾರೆ. ಸತ್ಪಾಲ್, ಶ್ಯಾಮ್ ನಾಥ್ ಮತ್ತು ಪಪ್ಪು ನಾಥ್ ಬಂಧಿತ ಆರೋಪಿಗಳು.
ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇವರು ಮಥುರಾ ಜಿಲ್ಲೆಯ ಶೇರ್ಗಢ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ. ಘಾಜಿಯಾಬಾದ್‌ನ ಮಧ್ಯವರ್ತಿಯೊಬ್ಬರಿಗೆ ಮಾರಾಟ ಮಾಡಲು ಹಾವುಗಳನ್ನು ಸೆರೆಹಿಡಿದಿದ್ದರು. ಹಾವನ್ನು ಹಿಡಿದು ಅವುಗಳ ವಿಷವನ್ನು ಹೊರತೆಗೆಯುತ್ತಿದ್ದರು. ನಂತರ ಹಾವು ಹಾಗೂ ವಿಷ ಎರಡನ್ನೂ ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಬೆಲ್ಟ್‌ಗಳು, ಬ್ಯಾಗ್‌ಗಳು ಮತ್ತು ಶೂಗಳಲ್ಲಿ ಬಳಸುವ ಹೆಚ್ಚಿನ ಬೆಲೆಯ ಚರ್ಮಕ್ಕಾಗಿ ಕಾಡುಗಳು ಮತ್ತು ರಾಷ್ಟ್ರೀಯ ಉದ್ಯಾನವನಗಳಿಂದ ನಾಗರಹಾವು ಮತ್ತು ಹೆಬ್ಬಾವುಗಳನ್ನು ಸೆರೆಹಿಡಿಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಹಾವು ಕಳ್ಳಸಾಗಣೆದಾರರ ಬಂಧನಕ್ಕೆ ಪೀಪಲ್ ಫಾರ್ ಅನಿಮಲ್ಸ್ ಸದಸ್ಯರು ಸಹಾಯ ಮಾಡಿದ್ದಾರೆ. ಹಾವುಗಳನ್ನು ಸೆರೆ ಹಿಡಿದು ಅಕ್ರಮವಾಗಿ ಮಾರಾಟ ಮಾಡುವಂತಿಲ್ಲ. ಇದು ವನ್ಯಜೀವಿ ಕಾಯ್ದೆ ಶೆಡ್ಯೂಲ್ 1 ರ ಅಡಿಯಲ್ಲಿ ಅಪರಾಧವಾಗುತ್ತದೆ. ಇಂತಹ ಸರೀಸೃಪಗಳ ಮಾರಾಟ ಮತ್ತು ಖರೀದಿ ಗಂಭೀರ ಅಪರಾಧವಾಗಿದೆ.
ಇಂಥ ಕಳ್ಳಸಾಗಣೆದಾರರು, ಭ್ರಷ್ಟ ಅರಣ್ಯ ಅಧಿಕಾರಿಗಳು ಮತ್ತು ರಾಷ್ಟ್ರೀಯ ಉದ್ಯಾನವನದ ಕೆಲವು ಉದ್ಯೋಗಿಗಳು ಸೇರಿಕೊಂಡು ಪಾಪದ ಕೆಲಸಕ್ಕೆ ಕೈಹಾಕುತ್ತಾರೆ. ಹಾವಿನ ವಿಷ ಮತ್ತು ಚರ್ಮವನ್ನು ಮಾರಾಟ ಮಾಡುವ ಮೂಲಕ ಲಕ್ಷಾಂತರ ಹಣವನ್ನು ಗಳಿಸುತ್ತಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ