/newsfirstlive-kannada/media/media_files/2025/08/14/kalaburagi-sharana-basappa-appa-1-2025-08-14-22-59-01.jpg)
ಕಲಬುರಗಿ: ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಕಲಬುರಗಿಯ ಪೂಜ್ಯ ಡಾ.ಶರಣಬಸಪ್ಪ ಅಪ್ಪಾ (Kalaburagi Sharana Basappa Appa) ಅವರು ಲಿಂಗೈಕ್ಯರಾಗಿದ್ದಾರೆ. ಇಂದು ರಾತ್ರಿ 9.23 ಕ್ಕೆ ಡಾ ಶರಣಬಸಪ್ಪ ಅಪ್ಪಾ ಲಿಂಗೈಕ್ಯರಾಗಿದ್ದಾರೆ.
ಡಾ.ಶರಣಬಸಪ್ಪ ಅಪ್ಪಾ ಜೀವನ
ಪೂಜ್ಯ ಡಾ. ಶರಣಬಸಪ್ಪ ಅಪ್ಪ ಅವರು ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನದ ದಾಸೋಹ ಮಹಾಮನೇಯ 8ನೇ ಪಿಠಾಧಿಪತಿ ಆಗಿದ್ದರು. ಪೂಜ್ಯ ದೊಡ್ಡಪ್ಪ ಅಪ್ಪ ಹಾಗೂ ಮಾತೋಶ್ರೀ ಗೋದುತಾಯಿ ಅವ್ಪಾಗೆ 14-11-1935 ರಂದು ಜನಿಸಿದ್ದರು. ಪ್ರಾಣಿ ಪ್ರಿಯರಾಗಿದ್ದ ಡಾ.ಶರಣಬಸಪ್ಪ ಅಪ್ಪ ಬಾಲ್ಯದಲ್ಲಿ ಪಾಠಕ್ಕಿಂತ ಆಟದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು.
ತಂದೆ ಪೂಜ್ಯ ದೊಡ್ಡಪ್ಪ ಅಪ್ಪಾ ಅವರನ್ನೇ ಮಾದರಿಯಾಗಿಸಿಕೊಂಡಿದ್ದ ಅವರು, ಆಧ್ಯಾತ್ಮ, ಧರ್ಮಚಿಂತನೆ, ತತ್ವಜ್ಞಾನದತ್ತ ಹೆಚ್ಚಿನ ಆಸಕ್ತಿ ಹೊಂದಿದ್ದರು. ಡಾ.ಅಪ್ಪಾ ಅವರನ್ನ ರಾಜಾಕಾರಣ ಹಾವಳಿಯಿಂದ ತಪ್ಪಿಸಲು 13ನೇ ವಯಸ್ಸಿನಲ್ಲಿ ಸೋಲ್ಹಾಪುರಕ್ಕೆ ಕರೆದೊಯ್ಯಲಾಗಿತ್ತು. ಸೋಲ್ಹಾಪುರದಲ್ಲಿ ತ್ರೀಕಾಲ ಪೂಜೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
14ನೇ ವಯಸ್ಸಿನಲ್ಲಿ ಡಾ.ಅಪ್ಪಾ ಅವರು ಮುಗುಳನಾಗಾವಿ ಪಟ್ಟದೇವರು ಶ್ರೀ ಸಿದ್ದಲಿಂಗ ಶಿವಾಚಾರ್ಯರಿಂದ ಧಾರ್ಮಿಕ ತರಬೇತಿ ಪಡೆದರು. ಡಾ.ಶರಣಬಸವಪ್ಪ ಅಪ್ಪಾ ತಮ್ಮ ಪ್ರಾಥಮಿಕ, ಪ್ರೌಢ ಶಿಕ್ಷಣ, ಪಿಯು ಮತ್ತು ಬಿಎ ಪದವಿ ಶಿಕ್ಷಣವನ್ನು ಕಲಬುರಗಿಯಲ್ಲಿ ಪೂರ್ಣಗೊಳಿಸಿದರು. ಬಳಿಕ ಧಾರವಾಡ ವಿಶ್ವವಿದ್ಯಾಲಯದಲ್ಲಿ ಎಂಎ ತತ್ವಜ್ಞಾನ ಅಧ್ಯಯನ ಪೂರ್ಣಗೊಳಿಸಿದರು. ಧಾರವಾಡದಲ್ಲಿ 1953ರಲ್ಲಿ ಎಂಎ ತತ್ವಜ್ಞಾನ ಅಧ್ಯಯನ ಮುಗಿಸಿ ಕಲಬುರಗಿಗೆ ವಾಪಸ್ ಬಂದರು.
ಇದನ್ನೂ ಓದಿ:ನಟ ದರ್ಶನ್ ಬಂಧನದಿಂದ ಮತ್ತೆ ಜೈಲು ಪಾಲಾಗುವವರೆಗೂ ಬಿ.ದಯಾನಂದ್ ಪಾತ್ರ ಏನ್ ಗೊತ್ತಾ?
/filters:format(webp)/newsfirstlive-kannada/media/media_files/2025/08/14/kalaburagi-sharana-basappa-appa-2025-08-14-21-57-37.jpg)
ಕೊನೆಗೆ ವೀರಶೈವ ತತ್ವಜ್ಞಾನ ಜೊತೆಗೆ ಸಂಸ್ಕೃತ ಅಧ್ಯಯನ ಮಾಡಿದರು. ವಚನಗಳ ಮೇಲೆ ವಿಶೇಷ ಆಸಕ್ತಿ ಹೊಂದಿದ್ದ ಅವರು, ವಚನಗಳ ತಲಸ್ಪರ್ಷಿಯ ಅಧ್ಯಯನ ಮಾಡಿದ್ದರು. ಬುದ್ದ, ಬಸವ, ಮಹಾವೀರ, ಶರಣರ ಹಾಗೂ ದಾಸರ ವಿಚಾರಗಳನ್ನ ಕರಗತ ಮಾಡಿಕೊಂಡಿದ್ದರು. 1972-74ರ ವರೆಗೆ ಪ್ರತಿಷ್ಠಿತ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಧಾರವಾಡದ ಕರ್ನಾಟಕ ವಿವಿಯ ಸಿಂಡಿಕೇಟ್ ಸದಸ್ಯರೂ ಆಗಿಯೂ ಸೇವೆ ಸಲ್ಲಿಸಿದ್ದರು.
ವೈಯಕ್ತಿಕ ಜೀವನ
17-02-1957ರಲ್ಲಿ ಹಾವೇರಿಯ ಶಿವಪ್ಪ ಆನೂರ್ ಶೆಟ್ಟರ ಮಗಳು ಕೋಮಲಾ ಜೊತೆ ವಿವಾಹವಾದರು. ಡಾ.ಶರಣಬಸವಪ್ಪ ಅಪ್ಪಾಗೆ ಮೊದಲ ಪತ್ನಿ ಕೋಮಲಾದೇವಿಯಿಂದ ಐವರು ಹೆಣ್ಣು ಮಕ್ಕಳು ಜನಿಸಿದರು. ಡಾ.ಗಂಗಾಂಬಿಕೆ, ಪ್ರೋ.ನೀಲಾಂಬಿಕೆ, ಶ್ರೀಮತಿ ಮುಕ್ತಾಂಬಿಕೆ, ಶ್ರೀಮತಿ ಉಮಾ ಹಾಗೂ ಗೋದಾವರಿ ಸೇರಿ ಐದು ಹೆಣ್ಣುಮಕ್ಕಳು. ಪುತ್ರಿ ಮುಕ್ತಾಂಬಿಕಾ ಸಣ್ಣ ವಯಸ್ಸಿನಲ್ಲಿಯೇ ನಿಧನರಾದರು. ಮೊದಲ ಪತ್ನಿ ಕೋಮಲಾ ತಾಯಿ ಅನಾರೋಗ್ಯದಿಂದ 23-03-1993 ರಲ್ಲಿ ನಿಧನರಾದರು.
9ನೇ ಪಿಠಾಧಿಪತಿ ಚಿ.ದೊಡ್ಡಪ್ಪ ಅಪ್ಪಾ
ಮೊದಲ ಪತ್ನಿ ಲಿಂಗೈಕ್ಯ ಬಳಿಕ ಡಾ.ಅಪ್ಪಾ ಎರಡನೇ ಮದುವೆಯಾದರು. 30-11-1993 ರಂದು ದಾಕ್ಷಾಯಿಣಿ ಅವ್ವಾ ಜೊತೆ ಎರಡನೇ ಮದುವೆಯಾದರು. ಅಕ್ಕ ಚೆನ್ನಬಸವಮ್ಮ ದೇಶಮುಖ ವಡಗಾಂವ ಅವರ ಪುತ್ರಿ ದಾಕ್ಷಾಯಿಣಿ ಅವ್ವಾ ಜೊತೆ ಮದುವೆಯಾದರು. ದಾಕ್ಷಾಯಿಣಿ ಅವ್ವಾ-ಅಪ್ಪಗೆ ನಾಲ್ವರು ಮಕ್ಕಳು ಜನಿಸಿದ್ದಾರೆ. ಕುಮಾರಿ ಶಿವಾನಿ, ಕುಮಾರಿ ಕೋಮಲಾ, ಕುಮಾರಿ ಮಹೇಶ್ವರಿ ಹಾಗೂ ಚಿ. ದೊಡ್ಡಪ್ಪ ಅಪ್ಪ ಎಂಬ ಮಕ್ಕಳಿದ್ದಾರೆ. ಇನ್ನು 9ನೇ ಪಿಠಾಧಿಪತಿ ಚಿ.ದೊಡ್ಡಪ್ಪ ಅಪ್ಪಾ.
ಇದನ್ನೂ ಓದಿ: ಜಾಮೀನು ರದ್ದಾದ ಮೇಲೆ ಈಗ ನಟ ದರ್ಶನ್ ಮುಂದೇನು ಮಾಡಬಹುದು? ಕನಿಷ್ಠ 6 ತಿಂಗಳು ಜೈಲು ವಾಸ ಗ್ಯಾರಂಟಿ
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಯಾಗಿದ್ದ ಡಾ.ಶರಣಬಸವಪ್ಪ ಅಪ್ಪ, ಶಿಕ್ಷಣ ಸಂಸ್ಥೆಗಳಿಗೆ ಭೇಟಿ ಕೊಟ್ಟು ವಿದ್ಯಾರ್ಥಿಗಳ ಕಲಿಕೆ ಗಮನಿಸುತ್ತಿದ್ದರು. ಶಿಕ್ಷಣವನ್ನೇ ಉಸಿರಾಗಿಸಿಕೊಂಡಿದ್ದ ಡಾ.ಶರಣಬಸವಪ್ಪ ಅಪ್ಪ, ಅನ್ನ ದಾಸೋಹ ಜೊತೆಗೆ ಶಿಕ್ಷಣ ದಾಸೋಹ ನೀಡಿದ್ದರು. ಕಲ್ಯಾಣ ನಾಡಿನಲ್ಲಿ ಶಿಕ್ಷಣ ಕ್ರಾಂತಿಗೈದ ಕೀರ್ತಿ ಅವರಿಗೆ ಸಲ್ಲುತ್ತದೆ. 1983ರಲ್ಲಿ ಶರಣಬಸವೇಶ್ವರ ಸಂಸ್ಥಾನದ 8ನೇ ಪಿಠಾಧಿಪತಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದರು.
ಪೂಜ್ಯ ಡಾ.ಶರಣಬಸಪ್ಪ ಅಪ್ಪ ಧಾರ್ಮಿಕ ಸಾಧನೆಗಳು
- 1963ರಲ್ಲಿ ಅಖಿಲ ಭಾರತ ಶಿವಾನುಭವ ಮಂಟಪ ಸ್ಥಾಪನೆ
- ಶರಣಬಸವಪ್ಪ ಅಪ್ಪ ಅಧ್ಯಕ್ಷತೆಯಲ್ಲಿ ಅಖಿಲ ಭಾರತ ಅನುಭವ ಮಂಟಪಗಳ ಮಹಾ ಸಮ್ಮೇಳನ
- 1996ರಲ್ಲಿ ದಾಸೋಹ ಜ್ಞಾನರತ್ನ ಸಾಹಿತಿಕ ಪಾಕ್ಷಿಕ ಪತ್ರಿಕೆ ಪ್ರಾರಂಭ
- ಮಹಾದಾಸೋಹಿ ಶರಣಬಸವ ಎಂಬ ಅಂಕಿತವಿಟ್ಟು 21 ವಚನಗಳ ರಚನೆ
- ವೀರಶೈವ ಮಹಾಸಭೆಯ ಅಧ್ಯಕ್ಷರಾಗಿ ಸತತ 15 ವರ್ಷ ಸೇವೆ
ಅಕ್ಷರ ಕ್ರಾಂತಿಕಾರಿ ಡಾ. ಶರಣಬಸಪ್ಪ ಅಪ್ಪ
60ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳ ಪ್ರಾರಂಭಿಸಿದ್ದ ಅವರು, 1973 ರಿಂದ 2017 ರವರೆಗೆ ಬರೋಬ್ಬರಿ 60 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳ ಪ್ರಾರಂಭ ಮಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಮಾಡಿದರು. IAS ಮತ್ತು IPS ತರಬೇತಿ ಕೇಂದ್ರ ಸ್ಥಾಪನೆ ಮಾಡಿದರು. ಜೊತೆಗೆ ಮಹಿಳೆಯರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದರು. 1935 ರಲ್ಲಿ ಮಹಾದೇವಿ ಕನ್ಯಾಪ್ರೌಢಶಾಲೆ ಸ್ಥಾಪನೆ ಮಾಡಿದರು. ಮಹಿಳೆಯರಿಗಾಗಿ ಪ್ರತ್ಯೇಕ ಇಂಜಿನಿಯರಿಂಗ್ ಕಾಲೇಜು ಪ್ರಾರಂಭಿಸಿದ್ದರು. 2017ರಲ್ಲಿ ಶರಣಬಸವ ವಿಶ್ವವಿದ್ಯಾಲಯ ಪ್ರಾರಂಭ ಮಾಡಿದರು.
- ಡಾ.ಶರಣಬಸವಪ್ಪ ಅಪ್ಪಾಗೆ 7ಕ್ಕೂ ಹೆಚ್ಚು ಪ್ರಶಸ್ತಿಗಳು
- 1988 ರಲ್ಲಿ ರಾಜ್ಯ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ
- 1992 ರಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರದಾನ
- ಕರ್ನಾಟಕ ಸರ್ಕಾರದ ಲಲೀತಕಲಾ ಅಕಾಡೆಮಿ ಇಂದ ಕಲಾಪೋಷಕ ಪ್ರಶಸ್ತಿ
- HKE ಶಿಕ್ಷಣ ಸಂಸ್ಥೆಯಿಂದ ವಿದ್ಯಾಭಂಡಾರಿ ಬಿರುದು
26 ಎಕರೆ ಜಮೀನಿನಲ್ಲಿ ಗೋ ಶಾಲೆ ನಿರ್ಮಾಣ ಮಾಡಿದ್ದಾರೆ. 2019ರಲ್ಲಿ ಪ್ರವಾಹ ಸಂದರ್ಣದಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಬರೋಬ್ಬರಿ 1 ಕೋಟಿ ರೂಪಾಯಿ ಹಣವನ್ನು ದಾನ ಮಾಡಿದ್ದರು. 2003 ರಲ್ಲಿ ದೆಹಲಿಯ ಪಾರ್ಲಿಮೆಂಟ್ ಅವರಣದ 9ನೇ ಗೇಟ್ ಬಳಿ ಬಸವಣ್ಣನವರ ಕಂಚಿನ ಪ್ರತಿಮೆ ಸ್ಥಾಪನೆ ಮಾಡಿಸಿದ್ದ ಕೀರ್ತಿ ಇವರಿಗೆ ಸಲ್ಲುತ್ತದೆ.
ಇದನ್ನೂ ಓದಿ:ಮೂರನೇ ಬಾರಿಗೆ ಪರಪ್ಪನ ಅಗ್ರಹಾರ ಜೈಲು ಸೇರಿದ ದರ್ಶನ್.. ಪವಿತ್ರ ಗೌಡ ಕೂಡ ಕಂಬಿ ಹಿಂದೆ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us