/newsfirstlive-kannada/media/media_files/2025/08/09/dharmasthala-case-2025-08-09-21-06-13.jpg)
ಅನಾಮಿಕ ದೂರುದಾರನ ಜೊತೆ ಎಸ್ಐಟಿ ತಂಡ
ನೇತ್ರಾವತಿ ನದಿ ತೀರದಲ್ಲಿ ನೆಲ ಅಗೆದು ಅಗೆದು ಸುಸ್ತಾಗಿರೋ ಎಸ್ಐಟಿ ತಂಡ ಇಂದು ಬಾಹುಬಲಿ ಬೆಟ್ಟ ಏರಿತ್ತು. ಅಧಿಕಾರಿಗಳಿಗೆ ಸರ್ಪ್ರೈಸ್ ಮೇಲೆ ಸರ್ಪ್ರೈಸ್ ಕೊಡ್ತಿರೋ ಅನಾಮಿಕ ದೂರುದಾರ ಇಂದು ಮತ್ತೊಂದು ಸ್ಥಳದಲ್ಲಿ ನಿಂತು ಸರ್ಪ್ರೈಸ್ ನೀಡಿದ್ದ. ಅನಾಮಿಕನ ಮಾತು ಕೇಳಿ ರತ್ನಗಿರಿ ರಹಸ್ಯ ಬೆನ್ನೇರಿದ ಎಸ್ಐಟಿ ತಂಡಕ್ಕೆ ಮತ್ತದೇ ನಿರಾಸೆ ಕಾಡಿದೆ.
ಧರ್ಮದ ನಾಡು, ಭಕ್ತರ ಬೀಡಿನಲ್ಲಿ ಬೀಡುಬಿಟ್ಟಿರೋ ಎಸ್ಐಟಿ ತಂಡ ದಿನಕ್ಕೊಂದು ಚಾಲೆಂಜ್ ಎದುರಾಗ್ತಿದೆ. 13, 14, 15 ಅಂತ ಭರದಿಂದ ನೆಲ ಅಗೆಯೋ ಕಾಮಗಾರಿ ನಡೆಸಿದ್ದ ಎಸ್ಐಟಿ ಇಂದು ರತ್ನಗಿರಿ ಬೆಟ್ಟ ಏರಿತ್ತು. ಅನಾಮಿಕ ದೂರು ದಾರ ತೋರಿಸಿದ ಮತ್ತೊಂದು ಸರ್ಪ್ರೈಸ್ ಸ್ಪಾಟ್ ಮೇಲೆ ಧರ್ಮಸ್ಥಳ ಗ್ರಾಮಸ್ಥರ ದೃಷ್ಟಿ ನೆಟ್ಟಿತ್ತು.
ಇದನ್ನೂ ಓದಿ: ಧರ್ಮಸ್ಥಳದಲ್ಲಿ ತನಿಖೆ ನಡೆಸುತ್ತಿರುವ SIT ಅನ್ನು ಪೊಲೀಸ್ ಠಾಣೆ ಎಂದು ಘೋಷಿಸಿದ ಸರ್ಕಾರ
ರತ್ನಗಿರಿ ರಹಸ್ಯ ಭೇದಿಸಲು ಮುಂದಾದ SIT ತಂಡ!
ನಿನ್ನೆ 15ನೇ ಪಾಯಿಂಟ್ನಲ್ಲಿ 4 ಕಡೆ ನೆಲ ಅಗೆದು ನಿರಾಸೆಯಲ್ಲಿ ವಾಪಸ್ಸಾಗಿದ್ದ SIT ತಂಡ ಇಂದು ಮತ್ತೊಂದು ಆತ್ಮವಿಶ್ವಾದ ಹೆಜ್ಜೆ ಇಟ್ಟಿತ್ತು. ಧರ್ಮಸ್ಥಳದ ರತ್ನಗಿರಿ ಬೆಟ್ಟದಲ್ಲಿ ಮಹಿಳೆ ಶ*ವ ಹೂತಿರೋ ಸ್ಥಳ ತೋರಿಸ್ತೀನಿ ಎಂದಿರೋ ಅನಾಮಿಕ ದೂರುದಾರನ ಮಾತು SIT ತಂಡವನ್ನ ರತ್ನಗಿರಿ ಬೆಟ್ಟ ಏರುವಂತೆ ಮಾಡಿತ್ತು. ಬಾಹುಬಲಿ ಪ್ರತಿಮೆ ಇರುವ ರತ್ನಗಿರಿ ಬೆಟ್ಟದ ದಾರಿ ಮಧ್ಯೆ ಅನಾಮಿಕ ವ್ಯಕ್ತಿ ಸ್ಥಳವೊಂದನ್ನ ತೋರಿಸಿದ್ದ.. ಇದನ್ನ 16ನೇ ಪಾಯಿಂಟ್ ಅಂತ ಗುರುತಿಸಿ SIT ಹುಡುಕಾಟ ನಡೆಸ್ತು.
ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ; ಪಾಯಿಂಟ್ 13ರ ಪರಿಶೋಧನೆಗೆ GPR ಬಳಕೆ ಮಾಡಲು ಎಸ್ಐಟಿ ಪ್ಲಾನ್
ಬಾಹುಬಲಿ ಬೆಟ್ಟದ ತಪ್ಪಲಿನ 16ನೇ ಪಾಯಿಂಟ್ನಲ್ಲಿ ಎಸ್ಐಟಿ ತಂಡ ಶೋಧಕಾರ್ಯ ನಡೆಸುವ ವೇಳೆ ಭಾರೀ ಮಳೆ ಸುರಿದಿತ್ತು.. ಗುಡುಗು ಸಹಿತ ಸುರಿದ ಧಾರಾಕಾರ ಮಳೆಯಿಂದ ಶೋಧ ಕಾರ್ಯ ಅಡ್ಡಿಯಾಯ್ತು.. ರಣಮಳೆ ಕಂಡು ಅಧಿಕಾರಿಗಳು ಟಾರ್ಪಾಲ್, ಛತ್ರಿಗಳ ಮೊರೆಹೋಗಿದ್ರು.. ಛಲ ಬಿಡದೇ 16ನೇ ಪಾಯಿಂಟ್ನಲ್ಲಿ 7 ಅಡಿಯಷ್ಟು ಆಳ ಅಗೆದ್ರೂ ಅಧಿಕಾರಿಗಳಿಗೆ ಯಾವುದೇ ಅಸ್ಥಿಪಂಜರ ಪತ್ತೆಯಾಗದೇ ಮತ್ತದೇ ನಿರಾಸೆ ಕಾಡಿದೆ. ನಾಳೆ 17ನೇ ಪಾಯಿಂಟ್ ಅನ್ನೋ ಮತ್ತೊಂದು ಭರವಸೆ ದಾರಿ ಎದುರಾಗಿದೆ.
ಅನಾಮಿಕ ದೂರುದಾರನಿಗೆ ಟೈಟ್ ಸೆಕ್ಯೂರಿಟಿ
ಧರ್ಮಸ್ಥಳದಲ್ಲಿ ಆಗ್ತಿರೋ ಬೆಳವಣಿಗಳನ್ನ ಗಮಸಿರೋ ಎಸ್ಐಟಿ ಅನಾಮಿಕ ದೂರುದಾರನಿಗೆ ಸೆಕ್ಯೂರಿಟಿ ಹೆಚ್ಚಿಸಿದೆ. ಅನಾಮಿಕನಿಗೆ ಗನ್ ಮ್ಯಾನ್, ಎಸ್ಕಾರ್ಟ್ ನೀಡಿರೋ ಎಸ್ಐಟಿ ಯಾವುದೇ ಸಮಸ್ಯೆ ಆಗದಂತೆ ಕಟ್ಟೆಚ್ಚರ ವಹಿಸಿದೆ. ಅನಾಮಿಕ ತೋರಿಸಿರೋ 17ನೇ ಪಾಯಿಂಟ್ನಲ್ಲಿ ಶೋಧಕಾರ್ಯ ನಡೆಸಲು ಎಸ್ಐಟಿ ಸಜ್ಜಾಗಿದೆ.
ಇದನ್ನೂ ಓದಿ: ಧರ್ಮಸ್ಥಳ ಘರ್ಷಣೆ; ಸ್ಥಳದಲ್ಲಿ ನಡೆದ ಘಟನೆ ಬಗ್ಗೆ ಸತ್ಯ ಬಿಚ್ಚಿಟ್ಟ ಬಿಗ್ಬಾಸ್ ಸ್ಪರ್ಧಿ ರಜತ್ ಕಿಶನ್
ತನಿಖೆ ದಾರಿತಪ್ಪಿಸಲಾಗ್ತಿದೆ ಅಂತ ವಕೀಲರ ಆರೋಪ
ಧರ್ಮಸ್ಥಳ ಗ್ರಾಮದ ಬಾಹುಬಲಿ ಬೆಟ್ಟದ ತಪ್ಪಲಿನಲ್ಲಿ ಬೇಕಂತಲೇ ಹೊಸ ಮಣ್ಣು ಸುರಿದು ತನಿಖೆ ದಾರಿತಪ್ಪಿಸುವ ಯತ್ನ ನಡೆದಿದೆ ಅಂತ ಸುಜಾತಾ ಭಟ್ ಪರ ವಕೀಲ ಮಂಜುನಾಥ್ ಹೊಸ ಬಾಂಬ್ ಸಿಡಿಸಿದ್ದಾರೆ. ಬಾಹುಬಲಿ ಬೆಟ್ಟದಲ್ಲಿ ಶೋಧ ನಡೆಸುವ ಜಾಗದಲ್ಲಿ ಮಣ್ಣು ಮತ್ತು ತ್ಯಾಜ್ಯ ಸುರಿದ ಬಗ್ಗೆ ವಕೀಲ ಮಂಜುನಾಥ್ ಫೋಟೋಗಳನ್ನ ಸಹ ಬಿಡುಗಡೆ ಮಾಡಿದ್ದಾರೆ.
ಅನಾಮಿಕ ಮೃತದೇಹ ಹೂತಿದ್ದನ್ನ ನೋಡಿದ್ದಾಗಿ ಇಬ್ಬರಿಂದ ದೂರು
ಅನಾಮಿಕ ದೂರುದಾರ ಮೃತದೇಹ ಹೂತಿದ್ದನ್ನ ನಾವು ನೋಡಿದ್ದೇವೆ ಅಂತ ಮತ್ತೆ ಇಬ್ಬರು ಎಸ್ಐಟಿ ಮುಂದೆ ದೂರು ನೀಡಲು ಹಾಜರಾಗಿದ್ರು. ಈ ವೇಳೆ ದೂರು ಸ್ವೀಕರಿಸಿದ ಎಸ್ಐಟಿ ಅಧಿಕಾರಿಗಳು ಸ್ಥಳೀಯ ಧರ್ಮಸ್ಥಳ ಠಾಣೆಗೆ ಅಧಿಕೃತ ದೂರು ನೀಡಲು ಸೂಚಿಸಿದ್ರು. ಅಧಿಕಾರಿಗಳ ಸೂಚನೆಯಂತೆ ಧರ್ಮಸ್ಥಳ ಠಾಣೆಯಲ್ಲಿ ಇಬ್ಬರೂ ದೂರು ದಾಖಲಿಸಿದ್ದಾರೆ. ಹಾಗಿದ್ರೆ ಆ ದೂರಿನಲ್ಲಿ ಏನಿದೆ ಅಂತ ನೋಡೋದಾದ್ರೆ..
ಹೂತಿಟ್ಟ ರಹಸ್ಯ ಗೊತ್ತಿದೆ!
ದೃಶ್ಯಮಾಧ್ಯಮದಲ್ಲಿ ತೋರುತ್ತಿರುವ ದೂರುದಾರ ವ್ಯಕ್ತಿಯನ್ನು ಗ್ರಾಮಸ್ಥರಾದ ನಾವು ಗುರುತಿಸಿರುತ್ತೇವೆ. ಆತ ರಹಸ್ಯವಾಗಿ ಜನರಿಗೆ ಕಾಣದಂತೆ ಧರ್ಮಸ್ಥಳ ಗ್ರಾಮದ ವಿವಿಧೆಡೆ ಮೃತದೇಹಗಳನ್ನ ಕೊಂಡೊಯ್ದು ಹೂತುಹಾಕಿರುವುದನ್ನು ನಾವು ವಿವಿಧ ಸ್ಥಳಗಳಲ್ಲಿ ನೋಡಿರುತ್ತೇವೆ.. ಜನರ ರಕ್ಷಣೆಗೆಂದು ಮಾನ್ಯ ಮುಖ್ಯಮಂತ್ರಿಗಳು ಸ್ಥಾಪಿಸಿರುವ ಈ ವಿಶೇಷ ತನಿಖಾದಳಕ್ಕೆ ನಾವು ಸಹಕಾರ ನೀಡಲೇಬೇಕು ಎಂದು ತೀರ್ಮಾನಿಸಿರುತ್ತೇವೆ.. ಪ್ರತ್ಯೇಕವಾಗಿ ಆತನು ರಹಸ್ಯವಾಗಿ ಹೂತುಹಾಕುತ್ತಿದ್ದ ಸ್ಥಳಗಳನ್ನು ನಾವು ಎಲ್ಲೆಲ್ಲಿ ನೋಡಿದ್ದೇವೆ ಎಂದು ಸ್ವತಂತ್ರವಾಗಿ ತೋರಿಸುವ ಅವಕಾಶವನ್ನೂ ಕೋರುತ್ತೇವೆ- ದೂರುದಾರರು
ಒಟ್ನಲ್ಲಿ ಧರ್ಮದ ನಾಡಲ್ಲಿ ಅಡಗಿರೋ ರಹಸ್ಯ, ಅನುಮಾನಗಳ ಪ್ರಶ್ನೆ ಪತ್ರಿಕೆಗೆ ಉತ್ತರ ಬರೆಯಲು ಎಸ್ಐಟಿ ಅಧಿಕಾರಿಗಳು ಕಸರತ್ತು ನಡೆಸ್ತಿರೋದಂತು ಸತ್ಯ.. ಇನ್ನೂ ತಲೆಬುರುಡೆ ರಹಸ್ಯ ಬಯಲು ಮಾಡ್ತೀವಿ ಅಂತ ಅದ್ಯಾಱರು ಧರ್ಮಸ್ಥಳ ಠಾಣೆ ಮೆಟ್ಟಿಲೇರುತ್ತಾರೋ ಆ ಮಂಜುನಾಥನೇ ಬಲ್ಲ.
ಇದನ್ನೂ ಓದಿ: ಯೂಟ್ಯೂಬರ್ಸ್ ಮೇಲೆ ಹಲ್ಲೆ.. ಧರ್ಮಸ್ಥಳ ಉದ್ವಿಘ್ನ, ಕೇಸ್ ದಾಖಲು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ