/newsfirstlive-kannada/media/post_attachments/wp-content/uploads/2023/09/Old-Parliment-1.jpg)
ನಿನ್ನೆಯಿಂದ ಸಂಸತ್ನ ವಿಶೇಷ ಅಧಿವೇಶನ ಆರಂಭ ಆಗಿದೆ. ಸಂಸತ್ನ ಮುಂಗಾರು ಅಧಿವೇಶನಕ್ಕೆ ತೆರೆಬಿದ್ದು ಒಂದೂವರೆ ತಿಂಗಳು ಕಳೆಯುವಷ್ಟರಲ್ಲೇ ವಿಶೇಷ ಅಧಿವೇಶನ ನಡೆಯುತ್ತಿದ್ದು ತೀವ್ರ ಕುತೂಹಲ, ಕಾತರಕ್ಕೆ ಕಾರಣ ಆಗಿದೆ. ವಿಶೇಷ ಕಲಾಪದಲ್ಲಿ ಒಂದಷ್ಟು ಮಹತ್ವದ ನಿರ್ಣಯಗಳು ಅಂಗೀಕಾರ ಆಗುವ ಬಗ್ಗೆ ಕೌತುಕ ಹೆಚ್ಚಿಸಿದೆ.
ಸಂಪೂರ್ಣ ಅತ್ಯಾಧುನಿಕ ತಂತ್ರಜ್ಞಾನ. ಹೊನ್ನಿನ ರಾಜದಂಡದ ಮುಕುಟ. ಒಂದೊಂದು ಬಾಗಿಲುಗಳಿಗೂ ಐತಿಹಾಸಿಕ ಮೆರುಗು. ಹಲವು ವೈಶಿಷ್ಟ್ಯ ಹೊಂದಿರುವ ನೂತನ ಸಂಸತ್ ಭವನದ ವಿಶೇಷ ಅಧಿವೇಶನ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗುವ ನಿರೀಕ್ಷೆಗಳು ಗರಿಗೆದರಿವೆ.
96 ವರ್ಷಗಳ ಹಳೇ ಸಂಸತ್ ಭವನ ಇನ್ನು ಇತಿಹಾಸ!
ಬ್ರಿಟಿಷರ ಆಳ್ವಿಕೆ, 2ನೇ ಮಹಾಯುದ್ಧ. ಸಂವಿಧಾನ ರಚನೆ ಹಾಗೂ ಹಲವು ಮಸೂದೆಗಳಿಗೆ ಸಾಕ್ಷಿಯಾಗಿದ್ದ 96 ವರ್ಷಗಳಷ್ಟು ಹಳೆಯದಾದ ಸಂಸತ್ ಭವನ ಇತಿಹಾಸದ ಪುಟ ಸೇರಿದೆ. ಕಳೆದ ಮೇ 28ರಂದು ಪ್ರಧಾನಿ ಮೋದಿ ಉದ್ಘಾಟನೆ ಮಾಡಿರುವ ಹೊಸ ಸಂಸತ್ ಭವನದಲ್ಲಿ ವಿಶೇಷ ಅಧಿವೇಶನ ಕರೆಯಲಾಗಿದ್ದು ಇಂದಿನಿಂದ ಆರಂಭವಾಗಲಿದೆ. ಹಳೇ ಸಂಸತ್ ಭವನ ಇನ್ಮುಂದೆ ಸ್ಮಾರಕ, ವಸ್ತು ಸಂಗ್ರಹಾಲಯವಾಗಿ ಬದಲಾಗಲಿದೆ.
ತ್ರಿಕೋನ ಆಕಾರದ 4 ಅಂತಸ್ತಿನ ದೊಡ್ಡ ಕಟ್ಟಡ
ನೂತನ ಸಂಸತ್ ಭವನ ತ್ರಿಕೋನ ಆಕಾರದ 4 ಅಂತಸ್ತಿನ ದೊಡ್ಡ ಕಟ್ಟಡವಾಗಿದ್ದು 64,500 ಚದರ ಮೀಟರ್ ವಿಸ್ತೀರ್ಣ ಹೊಂದಿದೆ. 888 ಲೋಕಸಭಾ ಸದಸ್ಯರು,384 ರಾಜ್ಯಸಭಾ ಸದಸ್ಯರು ಸೇರಿ ಒಟ್ಟು 1,280 ಸಂಸದರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಜ್ಞಾನದ್ವಾರ, ಶಕ್ತಿದ್ವಾರ, ಕರ್ಮದ್ವಾರ ಎಂಬ 3 ದ್ವಾರಗಳಿದ್ದು ಸಂಸದರು, ವಿಐಪಿ ಸಂದರ್ಶಕರು ಹಾಗೂ ಅಧಿಕಾರಿಗಳಿಗಾಗಿ ಪ್ರತ್ಯೇಕ ದ್ವಾರ ನಿರ್ಮಿಸಲಾಗಿದೆ. ಅಂದಾಜು 1,200 ಕೋಟಿ ರೂ. ವೆಚ್ಚದಲ್ಲಿ ನೂತನ ಸಂಸತ್ ಭವನದ ನಿರ್ಮಾಣ ಆಗಿದೆ.
ಆಟೋಮ್ಯಾಟಿಕ್ ಮೈಕ್ ಸಿಸ್ಟಮ್ ಆಳವಡಿಕೆ
ಇನ್ನು ಕಲಾಪ ನಡೆಯುವಾಗ ಸಂಸದರು ಮಾತನಾಡಲು ಆಟೋಮ್ಯಾಟಿಕ್ ಮೈಕ್ ಸಿಸ್ಟಮ್ ಆಳವಡಿಕೆ ಮಾಡಲಾಗಿದೆ. ಸಂಸದರು ನಿಗದಿತ ಸಮಯದವರೆಗೂ ಮಾತ್ರ ಮಾತನಾಡಬೇಕು, ಒಂದು ವೇಳೆ ಹೆಚ್ಚು ಹೊತ್ತು ಮಾತನಾಡಿದ್ರೆ ಆಟೋಮ್ಯಾಟಿಕ್ ಆಗಿ ಮೈಕಾಫ್ ಆಗುತ್ತೆ, ಬಯೋಮೆಟ್ರಿಕ್ ಸೆಕ್ಯೂರಿಟಿ ಸಿಸ್ಟಮ್ ಕೂಡ ಆಳವಡಿಕೆ ಮಾಡಲಾಗಿದೆ, ವಿಪಕ್ಷಗಳ ಸಂಸದರು ಸದನದ ಬಾವಿಗಿಳಿಯಲು ಅವಕಾಶ ಇರುವುದಿಲ್ಲ. ಹೊಸ ಸಂಸತ್ನಲ್ಲಿ ಸದನದ ಬಾವಿಯ ಜಾಗ ಚಿಕ್ಕದಾಗಿದ್ದು ಸದನದ ಬಾವಿಗಿಳಿಯಲು ಆಗಲ್ಲ. ಹೊಸ ಪಾರ್ಲಿಮೆಂಟ್ ಕಲಾಪಗಳು ಸಂಪೂರ್ಣ ಪೇಪರ್ಲೆಸ್ ಆಗಿರೋದು ಮತ್ತೊಂದು ವಿಶೇಷವಾಗಿದ್ದು ಎಲ್ಲಾ ಸಂಸದರಿಗೂ ಟ್ಯಾಬ್ ಕಂಪ್ಯೂಟರ್ ನೀಡಲಾಗಿರುತ್ತದೆ.
ಹೊಸ ಸಂಸತ್ನಲ್ಲಿ ‘ವಿಶೇಷ’ ಕಲಾಪ ಕೌತುಕ!
ಇನ್ನು ಮಹತ್ವದ ಬೆಳವಣಿಗೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಕೇಂದ್ರ ಸಂಪುಟ ಸಭೆಯಲ್ಲಿ ಮಸೂದೆಗೆ ಅನುಮೋದನೆ ನೀಡಲಾಗಿದೆ. ಮಹಿಳೆಯರಿಗೆ ಶೇಕಡಾ 33% ರಾಜಕೀಯ ಮೀಸಲಾತಿಗೆ ಅಂಕಿತ ಬಿದ್ದಿದೆ. ಇಂದು ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಂಡಿಸುವ ಸಾಧ್ಯತೆ ಇದೆ. ದೀರ್ಘ ಕಾಲದಿಂದಲೂ ನೆನೆಗುದಿಗೆ ಬಿದ್ದಿರುವ ಮಸೂದೆ ಮಂಡನೆಯಾಗುವ ನಿರೀಕ್ಷೆ ಇದೆ. ಅಂದಹಾಗೆ 1996ರಲ್ಲಿ ಹೆಚ್.ಡಿ.ದೇವೇಗೌಡರು ಪ್ರಧಾನಮಂತ್ರಿಯಾಗಿದ್ದಾಗ ಸಂಸತ್ನಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಸ್ಥಾನಗಳನ್ನು ಮೀಸಲಿಡುವಂತಹ ಮಸೂದೆ ಮಂಡನೆ ಆಗಿತ್ತು. ಬಳಿಕ ದೇವೇಗೌಡರ ಸಮ್ಮಿಶ್ರ ಸರ್ಕಾರ ಬಿದ್ದು ಹೋಗಿದ್ದರಿಂದ ಈ ಮಸೂದೆ ಕೂಡ ನೆನಗುದಿಗೆ ಬಿದ್ದಿತ್ತು. ಅದಾದ ಬಳಿಕವೂ ಹಲವು ಬಾರಿ ಮಸೂದೆ ಮಂಡನೆ ಆಗಿದ್ದರೂ ಭಿನ್ನಾಭಿಪ್ರಾಯಗಳ ಕಾರಣ ಮಸೂದೆಗೆ ಇನ್ನೂ ಮುಕ್ತಿ ಸಿಕ್ಕಿಲ್ಲ.
ಇನ್ನು ಇಂದಿನಿಂದ 4 ದಿನಗಳ ಕಾಲ ಹೊಸ ಸಂಸತ್ ಭವನದಲ್ಲಿ ವಿಶೇಷ ಅಧಿವೇಶನ ನಡೆಯಲಿದೆ. ವಿಶೇಷ ಮಸೂದೆಗಳ ಬಗ್ಗೆ ಸರ್ಕಾರ ಸೂಕ್ತ ಸಂದರ್ಭದಲ್ಲಿ ನಿರ್ಧಾರ ತೆಗೆದುಕೊಳ್ತೀವಿ ಅಂತಿದೆ.. ಈ ನಡುವೆ ಮಹಿಳೆಯರಿಗೆ ಮೀಸಲಾತಿ ಕೊಡಿಸುವುದು ಮಾಜಿ ಪ್ರಧಾನಿ ರಾಜೀವ್ಗಾಂಧಿ ಕನಸಿನ ಕೂಸಾಗಿತ್ತು ಅಂತ ಕಾಂಗ್ರೆಸ್ ಪ್ರತಿಪಾದಿಸ್ತಿದೆ.. ಅದೇನೇ ಇರಲಿ ಮಹಿಳಾ ಮೀಸಲಾತಿ ಮಸೂದೆ ಮಂಡನೆ ಆಗಿ ಅಂಗೀಕಾರವಾದರೆ ಲೋಕಸಭೆ ಮತ್ತು ವಿಧಾನಸಭೆಗಳ ಒಟ್ಟು ಸ್ಥಾನಗಳಲ್ಲಿ ಮೂರನೇ ಒಂದರಷ್ಟು ಸ್ಥಾನಗಳನ್ನ ಮಹಿಳೆಯರಿಗೆ ಮೀಸಲಿಡುವಂತಾಗಲಿದೆ. ಇದರಿಂದ ರಾಜಕೀಯ ಕ್ಷೇತ್ರದಲ್ಲೂ ನಾರಿಶಕ್ತಿಯ ಉಪಸ್ಥಿತಿ ಹೆಚ್ಚಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ