/newsfirstlive-kannada/media/post_attachments/wp-content/uploads/2023/09/dk-shivakumar-5.jpg)
ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಪ್ರಸಾದ್ ಅವರ ಕೋಲ್ಡ್ವಾರ್ ಮುಂದುವರಿದಿದೆ. ಹೈಕಮಾಂಡ್ ವಾರ್ನಿಂಗ್ ಬಳಿಕ ಸೈಲೆಂಟ್ ಆಗಿದ್ದ ಹರಿಪ್ರಸಾದ್, 2 ದಿನಗಳ ಹಿಂದೆ ಕೆಪಿಸಿಸಿ ಅಧ್ಯಕ್ಷರನ್ನು ಭೇಟಿಯಾಗಿ, ತಮ್ಮೊಳಗಿನ ನೋವನ್ನು ಹೇಳಿಕೊಂಡಿದ್ದಾರಂತೆ. ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಪಕ್ಷದ ನಾಯಕರೊಂದಿಗೆ ತುಸು ಅಂತರ ಕಾಯ್ದುಕೊಂಡಿದ್ದ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಇತ್ತೀಚೆಗೆ ಡಿ.ಕೆ.ಶಿವಕುಮಾರ್ರನ್ನು ಭೇಟಿಯಾಗಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ವಿರುದ್ಧ ಕೆಪಿಸಿಸಿ ಅಧ್ಯಕ್ಷರ ಬಳಿ ಬೇಸರ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಹಲವರು ಕಠಿಣ ಶ್ರಮ ಹಾಕಿದ್ದಾರೆ. ಅಂಥವರಲ್ಲಿ ಬಿ.ಕೆ.ಹರಿಪ್ರಸಾದ್ ಕೂಡ ಒಬ್ಬರು ಅನ್ನೋದ್ರಲ್ಲಿ ಎರಡು ಮಾತಿಲ್ಲ. ಕಾಂಗ್ರೆಸ್ ಅಧಿಕಾರ ಸಿಕ್ಕ ಬಳಿಕ ಬಿಕೆ ಹರಿಪ್ರಸಾದ್ಗೂ ಸಚಿವ ಸ್ಥಾನ ಸಿಗಬಹುದು ಅನ್ನೋ ಮಾತುಗಳು ಕೇಳಿ ಬಂದಿದ್ದವು. ಆದ್ರೆ ಅದೆಲ್ಲವೂ ಸುಳ್ಳಾಗಿತ್ತು. ಹೀಗಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪದೇ ಪದೇ ಬಿ.ಕೆ.ಹರಿಪ್ರಸಾದ್ ಬಹಿರಂಗವಾಗಿಯೇ ಅಸಮಾದಾನ ವ್ಯಕ್ತಪಪಡಿಸುತ್ತಿದ್ರು. ಈಡಿಗ ಸಮುದಾಯದ ಕಾರ್ಯಕ್ರಮದಲ್ಲೂ ಸಿದ್ದರಾಮಯ್ಯ ವಿರುದ್ಧ ಹರಿಪ್ರಸಾದ್ ಹರಿಹಾಯ್ದಿದ್ದರು.
ಇದನ್ನು ಓದಿ: Breaking News: ಹಿರಿಯ ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ವರ್ಗಾವಣೆ..!
ಇದರಿಂದ ಮುಜುಗರಕ್ಕೀಡಾಗಿದ್ದ ಸಿದ್ದರಾಮಯ್ಯ, ಹೈಕಮಾಂಡ್ಗೆ ಗಮನಕ್ಕೆ ತಂದರು. ಹರಿಪ್ರಸಾದ್ ಅವರ ಅತೃಪ್ತ ಮಾತುಗಳಿಗೆ ಬ್ರೇಕ್ ಹಾಕಿದ್ರು. ಆದ್ರೆ ಹೈಕಮಾಂಡ್ ವಾರ್ನಿಂಗ್ ಬಳಿಕ ಕೆಲ ದಿನಗಳಿಂದ ಮೌನಕ್ಕೆ ಶರಣಾಗಿರುವ ಬಿ.ಕೆ. ಹರಿಪ್ರಸಾದ್ ಡಿ.ಕೆ.ಶಿವಕುಮಾರ್ರನ್ನು ಭೇಟಿಯಾಗಿ ಎರಡು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಇಬ್ಬರು ನಾಯಕರ ಚರ್ಚೆಯ ಇನ್ಸೈಡ್ ಮಾಹಿತಿ ನ್ಯೂಸ್ಫಸ್ಟ್ಗೆ ಲಭ್ಯವಾಗಿದೆ.
ಹೈಕಮಾಂಡ್ ನಾಯಕರು ನನ್ನೊಂದಿಗೆ ಮಾತಾಡಿದ್ದಾರೆ. ನಿಮಗೆ ರಾಷ್ಟ್ರ ರಾಜಕಾರಣ ಸೂಕ್ತ ಅಂತಾ ಹೇಳಿದ್ದಾರೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡುತ್ತೇವೆ, ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿ ಯಾವುದಾದರೂ ರಾಜ್ಯದ ಉಸ್ತುವಾರಿ ಮಾಡೋ ಭರವಸೆ ನೀಡಿದ್ದಾರೆ. ಇದಕ್ಕೆ ನನ್ನ ಸಹಮತವಿದ್ದು ಒಪ್ಪಿದ್ದೇನೆ ಎಂದು ಡಿ.ಕೆ.ಶಿ ಬಳಿ ಪ್ರಸ್ತಾಪ ಮಾಡಿದ್ದಾರೆ. ಇನ್ನು ಇದೇ ವೇಳೆ ಸಿಎಂ ಸಿದ್ದರಾಮಯ್ಯ ವಿರುದ್ಧವೂ ಡಿ.ಕೆ.ಶಿವಕುಮಾರ್ ಬಳಿ ಹರಿಪ್ರಸಾದ್ ಬೇಸರ ವ್ಯಕ್ತಪಡಿಸಿದ್ದಾರಂತೆ.
ವಿಧಾನಸಭಾ ಕದನದಲ್ಲಿ ಐವರಿಂದ ಪಕ್ಷ ಸಂಘಟನೆ ಆಯ್ತು. ಸಿದ್ದರಾಮಯ್ಯ, ಶಾಸಕಾಂಗ ಪಕ್ಷದ ನಾಯಕರಾಗಿದ್ರು. ನೀವು ಅಧ್ಯಕ್ಷರಾಗಿ ಪಕ್ಷ ಸಂಘಟನೆ ಮಾಡಿದ್ರಿ, ಎಂ.ಬಿ.ಪಾಟೀಲ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ರು. ಪರಮೇಶ್ವರ್ ಪ್ರಣಾಳಿಕೆ ಸಮಿತಿಯ ಅಧ್ಯಕ್ಷರಾಗಿದ್ರು. ನಾನು ಚುನಾವಣಾ ಸಮಿತಿಯ ಸದಸ್ಯನಾಗಿ ಕಾರ್ಯ ನಿರ್ವಹಿಸಿದೆ. ಐವರಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗ ನಾಲ್ವರಿಗೆ ಅಧಿಕಾರ ಸಿಕ್ಕಿದೆ. ನನಗೊಬ್ಬನಿಗೆ ಏನೇನೂ ಇಲ್ಲ. ಸೌಜನ್ಯಕ್ಕಾದ್ರೂ ಸಿದ್ಧರಾಮಯ್ಯ ನನ್ನ ಕರೆದು ಮಾತಾಡಿಲ್ಲ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಡಿ.ಕೆ.ಶಿವಕುಮಾರ್ ಬಳಿ ಹರಿಪ್ರಸಾದ್ ಪ್ರಶ್ನೆ ಮಾಡಿದ್ದಾರಂತೆ. ಹೈಕಮಾಂಡ್ ನೋಟಿಸ್ ಬಳಿಕ ಸೈಲೆಂಟ್ ಆಗಿದ್ದ ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷರ ಮುಂದೆ ಸಿಎಂ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನ ನೋಡ್ತಿದ್ರೆ, ಹರಿಪ್ರಸಾದ್, ಮನದೊಳಗೆ ಅಸಮಾಧಾನದ ಕಿಡಿ ಇನ್ನೂ ಹೊಗೆಯಾಡುತ್ತಿರುವುದು ಗೊತ್ತಾಗುತ್ತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ