/newsfirstlive-kannada/media/media_files/2025/10/05/rishab-shetty-5-2025-10-05-11-27-31.jpg)
ಸಿನಿಮಾಗೆ ಬಂದಮೇಲೆ ಕಾಂತಾರಾ ಸಿನಿಮಾ ಸಕ್ಸಸ್​ವರೆಗೂ ರಿಷಬ್​ ಎದುರಿಸಿದ ಸವಾಲುಗಳು ಒಂದು ರೀತಿಯದ್ದಾಗಿದ್ದರೆ. ಸಿನಿಮಾಗೂ ಬರೋ ಮುಂಚೆ ಹಸಿದ ದಿನಗಳಿದ್ಯಲ್ಲ ನಿಜಕ್ಕೂ ಆ ಕಥೆ ಕೂಡ ಕಲಿಯೋ ಜಾಣರಿಗೆ ಸ್ಫೂರ್ತಿ. ರಿಷಬ್ ಶೆಟ್ಟಿ ಸಿನಿಮಾಗೂ ಬರೋ ಮುಂಚೆ ಎಷ್ಟೆಲ್ಲಾ ಕಷ್ಟ ಪಟ್ರು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.
ರಿಷಬ್ ಸಿನಿ ದುನಿಯಾದಲ್ಲಿ ಬದುಕು ಕಟ್ಟಿಕೊಳ್ಳೋದಕ್ಕೆ ಬೆಂಗಳೂರಿಗೆ ಬಂದಾಗ ಅವ್ರೂ ಕೂಡ ಸಾಕಷ್ಟು ಮಂದಿಯಿಂದ ನಿರಾಕರಣೆಗೆ ಒಳಗಾದ ಉದಾಹರಣೆಗಳಿವೆ. ರಿಷಬ್​ ತಮ್ಮ ಸ್ವಂತ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಆ ನಿರಾಕರಣೆಗಳನ್ನೆಲ್ಲಾ ಸಹಿಸಿಕೊಳ್ತಾನೆ ಹೋದ್ರು. ಕೊನೆಗೆ ಕನ್ನಡ ಸಿನಿಪ್ರಪಂಚದ ಹೆಮ್ಮರವಾಗಿ ಬೆಳೆದು ನಿಂತರು.
ಕಾಂತಾರ ಸಿನಿಮಾ ಬರೋ ಮುಂಚೆಯೇ ರಿಷಬ್​ ಸಾಕಷ್ಟು ಸಿನಿಮಾಗಳನ್ನ ಅಭಿನಯಿಸಿ, ನಿರ್ದೇಶನ ಕೂಡ ಮಾಡಿದ್ದರು. ಆದ್ರೂ ಬಹುತೇಕ ಮಂದಿಗೆ ರಿಷಬ್​ ಶೆಟ್ಟಿ ಅಂದ್ರೆ ಯಾರು ಅನ್ನೋದು ಗೊತ್ತಿರಲಿಲ್ಲ. ಬಟ್, 3 ವರ್ಷಗಳ ಹಿಂದೆ ಕಾಂತಾರ ರಿಲೀಸ್​ ಆಗಿ ಅದಕ್ಕೆ ಸಿಕ್ಕ ಯಶಸ್ಸು ನೋಡಿದ್ಮೇಲೆ ರಿಷಬ್​ರೊಳಗೆ ಒಬ್ಬ ಅಮೋಘ ಕಲಾವಿದ ಹಾಗೂ ಡೈರೆಕ್ಟರ್ ಕೂಡ ಇರೋದು ಕೂಡ ಗೊತ್ತಾಯಿತು. ಕಾಂತಾರದ ಕಾಡುಬೆಟ್ಟ ಶಿವನ ಪಾತ್ರಕ್ಕೆ ಜೀವ ತುಂಬಿದ ರೀತಿಗೆ ರಾಷ್ಟ್ರ ಪ್ರಶಸ್ತಿ ಕೂಡ ಹುಡುಕಿ ಬಂತು. ರಿಷಬ್ ಶೆಟ್ಟಿಯಂತಹ ನಟನ ಸಿನಿಮಾವೂ ನೂರಾರು ಕೋಟಿಯಷ್ಟು ಕಲೆಕ್ಷನ್​ ಮಾಡೋ ಸಾಮರ್ಥ್ಯವಿದೆ ಅನ್ನೋದು ಕೂಡ ಜಗತ್ತಿಗೆ ಗೊತ್ತಾಯ್ತು. ರಿಷಬ್​ಗೆ ಇಷ್ಟೆಲ್ಲಾ ನೇಮು ಫೇಮು ಸಿಗೋದಕ್ಕೆ ಕಾರಣವಾಗಿದ್ದು, ಆ ಒಂದು ಹಠ.. ಇವ್ರು ಸಿನಿಮಾದಲ್ಲಿ ತಮ್ಮ ಬಾವುಟ ನೆಡ್ಬೇಕು ಅಂತಲೇ ನಡೆದುಬಂದ ಹಾದಿ ರಣರೋಚಕ.. ರಿಷಭ್​​ರ ಕಥೆ ಕೇಳ್ತಿದ್ರೆ ಸಿನಿಮಾ ಕ್ಷೇತ್ರಕ್ಕೆ ಕಾಲಿಡ್ಬೇಕು ಅಂತಾ ಕಾಯ್ತಿರೋ ಪ್ರತಿಯೊಬ್ಬರಿಗೂ ಸ್ಫೂರ್ತಿ ಅಂತಾ ಹೇಳಿದ್ರೆ ತಪ್ಪಿಲ್ಲ.
ಬಿಸ್ಲೆರಿ ನೀರು ಮಾರುತ್ತಿದ್ದರು ರಿಷಬ್​ ಶೆಟ್ಟಿ
ರಿಷಬ್​ ಶೆಟ್ಟಿ ಏನಾದ್ರೂ ಸಾಧನೆ ಮಾಡ್ಲೇಬೇಕು ಅಂತಾ ಟೊಂಕ ಕಟ್ಟಿದ್ದವರು. ಮನೆಯಲ್ಲಿ ತೀರಾ ಬಡತನವೇನೂ ಇರಲಿಲ್ಲ. ಹಾಗಂತ, ಸಖತ್​ ಸಿರಿವಂತ ಫ್ಯಾಮಿಲಿನಿಂದ ಬಂದ ನಟನೂ ಅಲ್ಲ. ಹೀಗಿದ್ದರೂ ರಿಷಬ್​ಗೆ ಸಿನಿಮಾದಲ್ಲಿ ದೊಡ್ಡ ಹೆಸರು ಮಾಡ್ಬೇಕು ಅನ್ನೋ ಆಸೆ ದೊಡ್ಡದಾಗಿತ್ತು. ರಿಷಬ್ ಕುಟುಂಬ ಮಧ್ಯಮ ಕುಟುಂಬದ್ದಾಗಿತ್ತು. ಸಿನಿಮಾ ಮಾಡಲು ಬೇಕಾದ ಹಣ, ಸಾಥ್ ಕೊಡುವವರು ಇವೆಲ್ಲವೂ ದೊಡ್ಡ ಸವಾಲಾಗಿದ್ದವು. ಈ ಕಾರಣದಿಂದಾನೇ ಸಿನಿಮಾ ಕ್ಷೇತ್ರಕ್ಕೆ ಬರೋ ಮುನ್ನ ರಿಷಬ್ ತುಂಬಾನೇ ಸೈಕಲ್ ಹೊಡೆದಿದ್ದಾರೆ. ಬೆಂಗಳೂರಿನಲ್ಲಿ ಬದುಕೋಕ್ಕಾಗಿ ಒಂದು ಕಾಲದಲ್ಲಿ ಮಿನರಲ್​ ವಾಟರ್​ ಸಪ್ಲೈ ಮಾಡಿದ್ದಾರೆ. ಇದು ಅಚ್ಚರಿಯಾದ್ರೂ ಸತ್ಯ. ಸಿನಿಮಾ ಕ್ಷೇತ್ರಕ್ಕೆ ಬರೋದಕ್ಕೂ ಮುನ್ನ ರಿಷಬ್ ಹಲವಾರು ಸಾಹಸ ಮಾಡಿದ್ದಾರೆ. ಅದ್ರಲ್ಲಿ ನೀರಿನ ಮಾರಾಟವೂ ಒಂದು. ಆ ದಿನಗಳಲ್ಲಿ ಕೆಲವು ಕಂಪನಿಗಳಿಗೆ, ಕೆಲವು ಕ್ಲಬ್‌ಗಳಿಗೆ ವಾಟರ್ ಕ್ಯಾನ್​ಗಳನ್ನ ಸರಬರಾಜು ಮಾಡ್ತಿದ್ರು. ಅದ್ರಿಂದ ಬರ್ತಾ ಇರೋ ಹಣದಲ್ಲಿಯೇ ಸಿನಿಮಾ ಆ್ಯಕ್ಟಿಂಗ್, ನಿರ್ದೇಶನದ ಕೋರ್ಸ್ ಮಾಡಿದ್ದರಂತೆ.
ಇದನ್ನೂ ಓದಿ:ತಮಿಳುನಾಡು, ಕೇರಳದವರೂ ಫಿದಾ.. ಬಾಲಿವುಡ್​ ಸಿನಿ ಪ್ರೇಮಿಗಳಿಗೂ ಕಾಂತಾರವೇ ಅಚ್ಚುಮೆಚ್ಚು..!
ಜೀವನ ಅಂದ್ರೆ ಏನು ಅನ್ನೋದ್ ಅವತ್ತೆ ರಿಷಬ್‌ಗೆ ಅರ್ಥವಾಗಿತ್ತು. ತಾನು ಸಿನಿಮಾ ಕ್ಷೇತ್ರದಲ್ಲಿ ಕೆಲ್ಸ ಮಾಡ್ಬೇಕು ಅಂತಾ ಕನಸಿನ ಮೂಟೆ ಕಟ್ಟಿಕೊಂಡು ಮುಂದೆ ನುಗ್ಗುತ್ತಾರೆ. ಅಲ್ಪ ಸ್ವಲ್ಪ ಹಣಕ್ಕೆ ಕೆಲ್ಸ ಮಾಡ್ತಾರೆ. ಆವಾಗ ಅವ್ರಿಗೆ ಸಿಗ್ತಾ ಇರೋ ಸಂಬಳಕ್ಕಿಂತ ಕಟ್ಟಿಕೊಂಡ ಕನಸು ದೊಡ್ಡಗಾದಿತ್ತು. ಇದನ್ನು ನಾವು ಹೇಳೋದಕ್ಕಿಂತ ಅವರೇ ಹೇಳಿದ್ದಾರೆ ಕೇಳಿ.
ಹೇಗಿತ್ತು ಗೊತ್ತಾ ರಿಷಬ್ ಜರ್ನಿ?
ರಿಷಬ್ ಶೆಟ್ಟಿ ಒಂದ್ ರೀತಿ ಛಲದಂಕಮಲ್ಲ ಅಂದ್ರೂ ತಪ್ಪಿಲ್ಲ. ತಾವು ಗುರಿ ಇಟ್ರೆ ಹಿಂದೇಟು ಹಾಕೋರು ಅಲ್ಲ ಅನ್ನೋದನ್ನ ವರ್ಷಗಳ ಹಿಂದೆಯೇ ತೋರಿಸಿದ್ದಾರೆ. ಇವತ್ತು ಸಿನಿಮಾ ಕ್ಷೇತ್ರದಲ್ಲಿ ರಿಷಬ್ ದೊಡ್ಡ ಗುರಿ ಇಟ್ಕೊಂಡು ಮುನ್ನುಗ್ಗುತ್ತಿದ್ದಾರೆ. ಕಥೆಯನ್ನ ಅಳೆದು ತೂಗಿ ಅವರೇ ನಟನೆ, ನಿರ್ದೇಶನ ಎರಡನ್ನೂ ಮಾಡ್ತಾರೆ. ಅದಕ್ಕೊಂದು ಚೆಂದದ ದೃಶ್ಯಕಾವ್ಯ ಜೋಡಿಸ್ತಾರೆ. ಜನರಿಗೆ ಸಿನಿಮಾ ಆಪ್ತವಾಗುವಂತೆ ತಲುಪಿಸುತ್ತಾರೆ. ಈ ಎಲ್ಲಾ ಗುಣಗಳು ಕಾಂತಾರದಲ್ಲಿ ಇರುವುದರಿಂದಲೇ ಜನ ಮೆಚ್ಚಿಕೊಂಡಿದ್ದು. ಹಾಗೇ ರಾಷ್ಟ್ರೀಯ ಪ್ರಶಸ್ತಿ ಬಂದಿರೋದು. ಬಟ್, ಇವ್ರಿಗೆ ಟ್ಯಾಲೆಂಟ್ ಇದೆ ಅಂತಾ ಸ್ಯಾಂಡಲ್‌ವುಡ್ ರತ್ನಗಂಬಳಿ ಹಾಸಿ ಕರೆಯಲ್ಲಿಲ್ಲ. ಸಣ್ಣಪುಟ್ಟ ಪಾತ್ರ ಮಾಡಿದ್ದಾರೆ. ಅಸಿಸ್ಟೆಂಟ್ ಡೈರೆಕ್ಟರ್ ಕೆಲ್ಸ ಮಾಡಿದ್ದಾರೆ, ನಿರ್ಮಾಪಕರಿಗೆ ಡ್ರೈವರ್ ಕೆಲ್ಸವನ್ನು ನಿರ್ವಹಿಸಿದ್ದಾರೆ. ಬಟ್, ಇಷ್ಟೆಲ್ಲ ಮಾಡಿರೋ ರಿಷಬ್ ಹೋಟೆಲ್ ಉದ್ಯೋಮಕ್ಕೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತೆ.
ಇದನ್ನೂ ಓದಿ: ದಿನಕ್ಕೆ ಒಂದೇ ಹೊತ್ತು ಊಟ.. ಡಿವೋರ್ಸ್ ಕೊಟ್ಟು ಲವ್! ಇದು ಕಾಂತಾರ ವಿಲನ್ ಲೈಫ್​ಸ್ಟೈಲ್
ಸಿನಿಮಾ ಕ್ಷೇತ್ರವನ್ನು ಬಿಟ್ಟು ಹೋಟೆಲ್ ಉದ್ಯಮಕ್ಕೆ ಹೋಗ್ತಾರೆ. ತಮ್ಮ ಬಳಿ ಇರೋ ಹಣವನ್ನು ಅದ್ಕೆ ವಿನಿಯೋಗಿಸ್ತಾರೆ. ಸಾಲದೆಂಬಂತೆ 25 ಲಕ್ಷ ರೂಪಾಯಿ ಸಾಲ ಮಾಡಿ ಉದ್ಯಮಕ್ಕೆ ಹಾಕ್ತಾರೆ. ದುರಾದೃಷ್ಟವಶಾತ್ ಹೋಟೆಲ್ ಉದ್ಯಮ ರಿಷಬ್ ಕೈ ಹಿಡಿಯುವುದಿಲ್ಲ. ನೀನು ತನ್ನ ಉದ್ಯಮಕ್ಕೆ ಬೇಡವೇ ಬೇಡ ಅಂತಾ ಹೊರದಬ್ಬಿ ಬಿಡುತ್ತೆ. ಪರಿಣಾಮ ಅಂದು ಸೋತೆ ಅಂತಾ ತಲೆ ತಗ್ಗಿಸಿದ್ರೆ ಬಹುಶಃ ಇಂದು ಸಿನಿಮಾ ಕ್ಷೇತ್ರದಲ್ಲಿ ರಿಷಬ್ ಯಶಸ್ಸನ್ನು ನೋಡೋಲು ಸಾಧ್ಯವೇ ಆಗ್ತಾ ಇರ್ಲಿಲ್ಲ. ಅಂದು ಅನುಭವಿಸಿದ ನೋವು ಇಂದಿನ ಯಶಸ್ಸಿಗೆ ಅಡಿಪಾಯ ಹಾಕಿದೆ.
ಹೀರೋ ಆಗಿ ಆಯ್ಕೆ, ಬಟ್ ಸಿನಿಮಾ ಸ್ಟಾರ್ಟ್ ಆಗ್ತಿರಲಿಲ್ಲ!
ಸಿನಿಮಾ ಆಗಿರ್ಬಹುದು, ಉದ್ಯಮವಾಗಿರ್ಬಹುದು. ಇಂದಿನ ಯುವಕರಿಗೆ ಎಂಟ್ರಿಯಾದ ತಕ್ಷಣವೇ ಯಶಸ್ಸು ಅನ್ನೋದ್ ಬಂದು ಬಿಡ್ಬೇಕು. ಹಾಗೊಂದ್ ವೇಳೆ ಯಶಸ್ಸು ಸಿಕ್ಕಿಲ್ಲ, ಬರೀ ನೋವು ಸಿಕ್ತಿದೆ ಅಂತಾದ್ರೆ ಅವ್ರು ಅಲ್ಲಿರೋದೇ ಇಲ್ಲ. ಅವರಲ್ಲಿರೋ ಛಲ ಹಠ ಎಲ್ಲವೂ ಮಾಯವಾಗಿ ಬಿಡುತ್ತೆ. ಅಂಥವರು ರಿಷಬ್ ಜೀವನ ಕಥೆಯನ್ನು ಕೇಳ್ಬೇಕು. ಸಿನಿಮಾ ಕ್ಷೇತ್ರದಲ್ಲಿ ರಿಷಬ್ ಒಂದು ಹಂತಕ್ಕೆ ಬಂದ್ಮೇಲೆ ಆರೇಳು ಸಿನಿಮಾಗೆ ಹೀರೋ ಆಗಿ ಆಯ್ಕೆಯಾಗ್ತಾರೆ. ಸಿನಿಮಾ ಮಾತ್ರ ಶುರುವಾಗೋದಿಲ್ಲ. ಅದು ರಿಷಬ್‌ಗೆ ಮತ್ತೊಂದು ರೀತಿಯ ಸಂಕಷ್ಟವನ್ನು ತಂದಿತ್ತು. ಅಂದೊಂದು ದಿನ ರಿಷಬ್‌ಗೆ ಒಂದು ಪುಸ್ತಕ ಕೈಗೆ ಸಿಗುತ್ತೆ. ಅದುವೇ ಅವರ ಹೆಸ್ರು ಚೇಂಜ್ ಆಗುವಂತೆ ಮಾಡುತ್ತೆ. ಇಂದು ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿರೋ ಮೂಲವು ಅದೇ ಪುಸ್ತಕ ಅಂದ್ರೆ ತಪ್ಪಾಗದು.
ಇದನ್ನೂ ಓದಿ:ಕಾಂತಾರ ಫಸ್ಟ್​ ಡೇ ಗಳಿಸಿದ್ದು ಕೋಟಿ ಕೋಟಿ.. ಕನ್ನಡದಲ್ಲಿ ಗಳಿಸಿದ್ದು ಎಷ್ಟು ಕೋಟಿ..?
ರಿಷಬ್​ ಶೆಟ್ಟಿಯವರ ಮೂಲ ಹೆಸ್ರು ಪ್ರಶಾಂತ್​ ಶೆಟ್ಟಿ.. ಪ್ರಶಾಂತ್ ಶೆಟ್ಟಿ ತಂದೆ ಭಾಸ್ಕರ್ ಶೆಟ್ಟಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಹೀಗಾಗಿ ಸಿನಿಮಾದಲ್ಲಿ ಬೆಳೆಯಬೇಕು ಅಂತ ಹೆಸರು ಬದಲಾವಣೆ ಮಾಡಿಕೊಳ್ತೀನಿ ಅಂತಾ ಪ್ರಶಾಂತ್ ತಂದೆಗೆ ಹೇಳಿದ್ದರಂತೆ. ಈ ವೇಳೆ ರಾಜ್‌ಕುಮಾರ್, ರಜಿನಿಕಾಂತ್ ಅವರಂತೆ ಆರ್ ಅಕ್ಷರದಿಂದ ಹೆಸರು ಇಟ್ಟುಕೊಳ್ಳುವಂತೆ ತಂದೆ ಸೂಚಿಸಿದ್ದಾರೆ. ಆಗ ಹೊಳೆದಿದ್ದೆ ರಿಷಬ್ ಹೆಸರು. ಹಿಂದೆ ಮುಂದೆ ಯೋಚಿಸದ ಪ್ರಶಾಂತ್ ಶೆಟ್ಟಿ ತಮ್ಮ ಹೆಸರನ್ನು ‘ರಿಷಬ್ ಶೆಟ್ಟಿ’ ಅಂತ ಬದಲಾಯಿಸಿಕೊಳ್ಳುತ್ತಾರೆ.ಹೆಸರು ಬದಲಾವಣೆ ಆಗೋವರೆ ರಿಷಬ್ ಜೀವನದ ಒಂದು ಚಾಪ್ಟರ್ ಆಗಿದ್ರೆ, ಹೆಸ್ರು ಬದಲಾವಣೆಯಾದ್ಮೇಲೆ ಮತ್ತೊಂದು ರೀತಿಯ ಚಾಪ್ಟರ್ ತೆರೆದುಕೊಳ್ಳುತ್ತೆ. ಅದರ ಜೊತೆ 2021ರಿಂದ ಗಜಕೇಸರಿ ಯೋಗಗವೂ ಸೇರಿಕೊಳ್ಳುತ್ತೆ. ಪರಿಣಾಮ ಇಂದು ರಿಷಬ್ ಶೆಟ್ಟಿ ಸಿನಿಮಾ ಕ್ಷೇತ್ರದಲ್ಲಿ ಮುಟ್ಟಿದೆಲ್ಲ ಚಿನ್ನವಾಗುತ್ತಿದೆ ಅಂತಾ ಖುದ್ದು ಅವರ ತಂದೆಯೇ ಹೇಳ್ತಾರೆ. ಹೀಗಿರುವ ರಿಷಬ್​ಗೆ ಕಾಂತಾರ ಇವತ್ತು ಜಗತ್ತಿನಾದ್ಯಂತ ಗುರುತು ಕೊಟ್ಟಿದೆ.
ಇದನ್ನೂ ಓದಿ: ಕಾಂತಾರ, ರಿಷಭ್ ಶೆಟ್ಟಿ ಬಗ್ಗೆ ರಾಕಿ ಭಾಯ್ ಯಶ್​ ಏನ್ ಹೇಳಿದರು..? ರುಕ್ಮಿಣಿ ವಸಂತ್​..
ರಿಷಬ್ ಲೈಫ್ ಸ್ಟೋರಿ ಪ್ರತಿಯೊಬ್ಬ ವ್ಯಕ್ತಿಗೂ ಪ್ರೇರಣೆಯಾಗುವಂತಹದ್ದು. ಯಾರೂ ಕೂಡ ಸೋತಾಗ ತಲೆ ಭಾಗಿಸದೇ ಛಲದಿಂದ ಮುಂದೆ ಸಾಗ್ಬೇಕು ಅನ್ನೋದನ್ನು ರಿಷಬ್ ಕಥೆ ಮಸೇಜ್ ಕೊಡ್ತಿದೆ. ಕನ್ನಡ ಸಿನಿಮಾ ಇಂಡಸ್ಟ್ರಿಯಿಂದ ಇನ್ನಷ್ಟು ಒಳ್ಳೆಯ ಸಿನಿಮಾಗಳು ಬರುವಂತಾಗಲಿ. ಪ್ರಶಸ್ತಿಗಳು ಮಗದೊಷ್ಟು ಬರಲಿ ಅಂತಾ ಆಶಿಸೋಣ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ