/newsfirstlive-kannada/media/media_files/2025/10/05/kantara-2-2025-10-05-14-02-25.jpg)
ಈಗಿನ ಕಾಲದಲ್ಲಿ ಜನ ಥಿಯೇಟರಿಗೆ ಬರೋದೇ ಕಷ್ಟ.. ಅಂತಾದ್ರಲ್ಲಿ ದಿನದ ಮೂರೂ ಹೊತ್ತು, ಸಿನಿಮಾ ರಿಲೀಸ್​ ಆಗಿರೋ ಕಡೆಯಲ್ಲೆಲ್ಲ ಹೌಸ್​ಫುಲ್ ಓಡ್ತಿದೆ ಅಂದ್ರೆ ಅಲ್ಲೇನೋ ಶಕ್ತಿ ಇರಬೇಕಲ್ವಾ.. ಕಥೆನೋ, ಖ್ಯಾತ ನಟನದ್ದೋ, ನಿರ್ದೇಶಕನದ್ದೋ ಸಿನಿಮಾ ಇರ್ಬೇಕು ಅಂದುಕೊಂಡ್ರೆ ಅದು ತಪ್ಪು.. ಬರೀ ಯುವಕರು ಮಾತ್ರವಲ್ಲ.. ಮನೆಯೊಳಗೇ ಕುಳಿತಿದ್ದ ಸ್ತ್ರೀಯರನ್ನ, ವೃದ್ಧರ ಜೊತೆಗೆ ಒಂದಿಡೀ ಕುಟುಂಬಗಳೇ ಥಿಯೇಟರಿಗೆ ಬರುವಂತೆ ಮಾಡ್ತಿದೆ ಕಾಂತಾರ ಸಿನಿಮಾ.. ಯಾಕಂದ್ರೆ ಆ ಸಿನಿಮಾದಲ್ಲಿ ಹೀರೋ ಯಾರು ಗೊತ್ತಾ? ನಾವು ನೀವೆಲ್ಲ ಬಲವಾಗಿ ನಂಬುವ ದೈವ.
ಮೈ ಜುಮ್​ ಎನಿಸುವ ದೃಶ್ಯ...ಈ ದೃಶ್ಯವನ್ನ ಥಿಯೇಟರ್​​ನಲ್ಲಿ ನೋಡಿದ್ದ ಜನ ಚಿತ್ತಾಗಿ ಹೋಗಿದ್ರು.. ಅಕ್ಷರಶಃ ಮೂಕಪ್ರೇಕ್ಷಕರಾಗಿಬಿಟ್ಟಿದ್ರು.. ಕಾಂತಾರದ ಕಾಡುಬೆಟ್ಟ ಶಿವನ ಮೈಮೇಲೆ ಉಗ್ರರೂಪಿ ಗುಳಿಗನ ಆವಾಹನೆಯಾಗಿ ಬಡವರ ಭೂಮಿಯ ಮೇಲೆ ಕಣ್ಣಾಕ್ಕಿದ್ದ ದುಷ್ಟರ ಸಂಹಾರ ಮಾಡುವ ದೃಶ್ಯ ನೋಡಿದ್ದವರು ಥಿಯೇಟರ್​​ನಲ್ಲಿ ಶಿಳ್ಳೆ ಚಪ್ಪಾಳೆಗಳ ಸುರಿಮಳೆಗೈದಿದ್ದರು.
ಇದನ್ನೂ ಓದಿ:ಕಾಂತಾರದ ರೆಬೆಲ್ ಸಾಂಗ್ ಹಾಡಿದ್ದು ಸು ಫ್ರಂ ಸೋದ ‘ಯದು’ ಅಣ್ಣ..!
ಅಂದ್ರೆ ಕಾಂತಾರ ಸಿನಿಮಾ ಬರೋವರೆಗೂ ತುಳುನಾಡಿನ ಪವರ್​ಫುಲ್​ ದೈವಗಳಾದ ಪಂಜುರ್ಲಿ, ಹಾಗೂ ಉಗ್ರಸ್ವರೂಪಿ ಗುಳಿಗನ ಬಗ್ಗೆ ರಾಜ್ಯದ ಜನರಿಗೆ ಹೆಚ್ಚೇನೂ ಗೊತ್ತಿರಲಿಲ್ಲ. ಕಾಂತಾರ ಬಂದ್ಮೇಲೆ ತುಳು ನಾಡಿನ ಗುಳಿಗ ದೈವ ಅದೆಷ್ಟು ಶಕ್ತಿಶಾಲಿ. ಅಧರ್ಮ ಮಾಡುವವರಿಗೆ ಅದೆಷ್ಟು ರಣಭಯಂಕರ ಅನ್ನೋದನ್ನ ನಾಯಕ ಕಮ್ ನಿರ್ದೇಶಕ ರಿಷಬ್​ ಶೆಟ್ಟಿ ಕಣ್ಣಿಗೆ ಕಟ್ಟಿಕೊಟ್ಟಿದ್ರು. ಬಟ್, ಈಗ ಅದೇ ಡಿವೈನ್​ ಸ್ಟಾರ್​ ರಿಷಬ್​ ಶೆಟ್ಟಿ ಹಾಗೂ ಟೀಮ್​ ಕಾಂತಾರದ ಪ್ರೀಕ್ವೆಲ್​ನ ಜನರ ಮುಂದಿಟ್ಟಿದೆ. ಇಡೀ ರಾಜ್ಯ ಮಾತ್ರವಲ್ಲ ದೇಶಾದ್ಯಂತ ದೈವಭಕ್ತಿಯ ರಸದೌತಣ ಸವಿಯಲು ಥಿಯೇಟರ್​ಗಳಿಗೆ ಜನಪ್ರವಾಹವೇ ಹರಿದುಬರ್ತಿದೆ. ಸಪ್ತಸಾಗರವನ್ನೂ ದಾಟಿ 30ಕ್ಕೂ ಹೆಚ್ಚು ದೇಶಗಳಲ್ಲಿ ಕಾಂತಾರ ಭರ್ಜರಿ ಕಮಾಲ್​ ಮಾಡ್ತಿದೆ. ವೀಕ್ಷಕರೇ, ಈ ಬಾರಿಯೂ ದೇಶ, ವಿದೇಶಗಳಲ್ಲೂ ಈ ಮಹಾದೃಶ್ಯಕಾವ್ಯಕ್ಕೆ ಬಹುಪರಾಕ್ ಕೇಳಿಬರೋದಕ್ಕೆ ಚಿತ್ರದಲ್ಲಿರುವ ಆ ಒಂದು ದೈತ್ಯಶಕ್ತಿಯೇ ಪ್ರಮುಖ ಕಾರಣ. ಆ ಶಕ್ತಿ ಬೇರಾವುದೂ ಅಲ್ಲ..ಇಡೀ ಕಾಂತಾರದ ಜೀವಾಳ, ತುಳುನಾಡಿಗರ ಪರಮದೈವ.. ಸ್ವಾಮಿ ಗುಳಿಗ
ರುದ್ರ ಗುಳಿಗ, ರಾಹು ಗುಳಿಗ, ನೆತ್ತರ ಗುಳಿಗ.. ಇವರೆಲ್ಲಾ ಯಾರು?
ಕಾಂತಾರ ಸಿನಿಮಾದಲ್ಲಿ ಕ್ಲೈಮ್ಯಾಕ್ಸ್​ನಲ್ಲಿ ಕಾಡುಬೆಟ್ಟ ಶಿವನ ಪಾತ್ರಧಾರಿ ರಿಷಬ್​ ಶೆಟ್ಟಿಯ ಮೈಮೇಲೆ ಗುಳಿಗ ದೈವದ ಆವಾಹನೆ ಹಾಗೂ ಆರ್ಭಟ ಸಿನಿಮಾದ ದೊಡ್ಡ ತಿರುವಾಗಿತ್ತು. ಕಾಂತಾರ ಚಾಪ್ಟರ್​ 1ರಲ್ಲೂ ಗುಳಿಗನ ಅಬ್ಬರವನ್ನ ರಿಷಬ್​ ಈ ಬಾರಿ ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. ಸಿನಿಮಾದ ಮೊದಲಾರ್ಧದಲ್ಲಿ ದೈವಗಳ ಬಗ್ಗೆ ಹೆಚ್ಚೇನೂ ಹೇಳದಿದ್ದರೂ, ಸೆಕೆಂಡ್​ ಹಾಫ್​ ನೋಡುಗರನ್ನ ಮತ್ತೆ ಕಟ್ಟಿ ಹಾಕಿಬಿಡುತ್ತದೆ. ಅದಕ್ಕೆ ಕಾರಣ ಮತ್ತದೇ ಗುಳಿಗ ದೈವದ ಎಂಟ್ರಿ ಹಾಗೂ ಅಬ್ಬರ. ಕಾಂತಾರ ಚಾಪ್ಟರ್​ 1ರಲ್ಲಿ ಸಂಪತ್​​ಭರಿತ ದಟ್ಟಕಾಡಿನ ರಕ್ಷಣೆಗೆ, ಕಾಡಿನ ಜನರನ್ನ ಕಾಪಾಡಲು ಬರುವವನೇ ಗುಳಿಗ. ಸ್ವಾಮಿ ಗುಳಿಗ ಹೇಗ್ ಬರ್ತಾರೆ.. ಯಾವಾಗ ಬರ್ತಾರೆ ಅನ್ನೋದನ್ನ ತಿಳಿದುಕೊಳ್ಳೊದಕ್ಕೆ ನೀವು ಸಿನಿಮಾವನ್ನೇ ನೋಡ್ಬೇಕು.. ಅಂದಹಾಗೇ ವೀಕ್ಷಕರೇ, ನಾವಿಲ್ಲಿ ಸಿನಿಮಾದ ಕಥೆಯನ್ನಾಗಲಿ, ತಿರುಳನ್ನಾಗಲಿ ಎಲ್ಲೂ ಬಿಟ್ಟುಕೊಡಲು ಸಾಧ್ಯವಿಲ್ಲ.
ಕಾಂತಾರ ಅಧ್ಯಾಯ 1ರಲ್ಲೂ ಗುಳಿಗನದ್ದೇ ಮಹತ್ವದ ಪಾತ್ರ. ಅದರ ಜೊತೆಗೆ ಇನ್ನೂ ಕೆಲವು ಪವರ್​ಫುಲ್​ ದೈವಗಳ ಎಂಟ್ರಿ ನಿಜಕ್ಕೂ ಮೈಜುಮ್​ ಅನಿಸೋದ್ರಲ್ಲಿ ಸಂಶಯವೇ ಇಲ್ಲ..ಅಷ್ಟಕ್ಕೂ, ಈ ಸಿನಿಮಾ ನೋಡಿದ್ಮೇಲೆ ತುಂಬಾ ಜನರಿಗೆ ಮೂಡುವ ಪ್ರಶ್ನೆ ಒಂದೇ.. ಈ ಗುಳಿಗ ಅಂದ್ರೆ ಯಾರು ಅನ್ನೋದು? ಈ ದೈವದ ಹಿನ್ನೆಲೆ ಏನು ಅನ್ನೋದು.. ವೀಕ್ಷಕರೇ, ಶಿವಧೂತ ಗುಳಿಗನ ಬಗ್ಗೆ ನಮ್ಮಲ್ಲಿ ಹಲವಾರು ಐತಿಹ್ಯದ ಕಥೆಗಳಿವೆ. ಅದರಲ್ಲಿ ಮೊದಲನೇಯದಾದುದು ಪೌರಾಣಿಕ ಐತಿಹ್ಯ ಎರಡನೇಯದಾಗಿ ಜ್ಞಾನಪದೀಯವಾಗಿ ಬರುವಂತಹ ಐತಿಹ್ಯ, ಮೂರನೇಯದು ವಿವಿಧ ಮಾಧ್ಯಮಗಳ ಮೂಲಕ ಪ್ರಚರಿಸಲ್ಪಟ್ಟು ಅವುಗಳ ಮುಖಾಂತರ ಎಲ್ಲರಿಗೂ ಗೊತ್ತಾಗುವಂತಹದ್ದು..
ಗುಳಿಗನನ್ನ ಜ್ಯೋತಿಷ್ಯಶಾಸ್ತ್ರದ ಸ್ಥಿತಿಯಲ್ಲೂ ನೋಡಲಾಗುತ್ತೆ.. ಜ್ಯೋತಿಷ್ಯ ಶಾಸ್ತ್ರದಲ್ಲಿ ಗುಳಿಗ ಅಂದ್ರೆ ಗುಳಿಕ ಅಂತಲೂ ಹೇಳಬಹುದು. ಗುಳಿಕ ಅಂದ್ರೆ ಮಾಂದಿ ಎಂದರ್ಥವಂತೆ.. ಮಾಂದಿ ಅಂದ್ರೆ ಮಂದನ ಮಗ, ಅಂದ್ರೆ ಶನಿಯ ಮಗ ಅಂತಲೂ ಗುಳಿಗನನ್ನ ಕರೆಯಲಾಗುತ್ತೆ ಅನ್ನೋದು ಕೆಲ ಧರ್ಮಶಾಸ್ತ್ರಜ್ಞರು ಹೇಳುವ ಮಾತು..ಈ ಗುಳಿಕ ತನ್ನ ಕಾಲದಂತೆ ಪ್ರತಿನಿತ್ಯ ಇಂತಿಷ್ಟು ಹೊತ್ತಿಗೆ ಉದಯವಾಗ್ತಾನೆ.. ಅವನಿರುವ ಒಂದೂವರೆಗಂಟೆಯ ಕಾಲವನ್ನ ಗುಳಿಕ ಕಾಲ ಅಂತಾ ನಮ್ಮ ಶಾಸ್ತ್ರಜ್ಞರು ಕರೆಯೋ ಪದ್ಧತಿ ಇದೆ.. ಅವನಿದ್ದ ಕಾಲದಲ್ಲಿ ಇಂತಹದ್ದು ಮಾಡಬಹುದು ಇಂತಹದ್ದುನ್ನ ಮಾಡಬಾರದು ಎನ್ನುವ ನಿಯಮಗಳೂ ಶಾಸ್ತ್ರದಲ್ಲಿದೆ.. ಇನ್ನು ಉತ್ತರ ಭಾರತೀಯರ ಕಥೆಯ ಪ್ರಕಾರ ಗುಳಿಕನನ್ನ ಯಮನ ಮಗ ಅಂತಲೂ ಕರೆಯೋದುಂಟಂತೆ..
ಗುಳಿಗನು ಶಿವನ ಅಸಂಖ್ಯಾತ ಪ್ರಮಥ ಗಣಗಳಲ್ಲಿ ಪ್ರಮುಖ ಗಣ. ಇವನನ್ನ ತ್ರಪಾಲನೆಂದೇ ತುಳುನಾಡಿನ ಬಹುತೇಕ ಜನ ನಂಬುತ್ತಾರೆ. ನ್ಯಾಯ, ಸತ್ಯಕ್ಕೆ ಬದ್ಧನಾಗಿರುವ ಗುಳಿಗ ಅತೀ ಕೋಪಿಷ್ಟ ಕೂಡ ಹೌದು.. ಕೋಪಿಷ್ಟ ಅನ್ನೊದಕ್ಕಿಂತ ಹೆಚ್ಚಾಗಿ ಉಗ್ರರೂಪಿ..ಅನ್ಯಾಯ ಸಹಿಸೋದಿಲ್ಲ.. ಅನ್ಯಾಯ ಮಾಡಿದವರನ್ನ ಗುಳಿಗ ಶಿಕ್ಷಿಸದೇ ಬಿಡಲಾರ ಎಂಬ ನಂಬಿಕೆ ಪ್ರಬಲವಾಗಿಯೇ.. ಅದನ್ನೇ ನೋಡಿ ಕಾಂತಾರಾದ ಎರಡೂ ಭಾಗಗಳಲ್ಲೂ ತೋರಿಸಿರೋದು.. ಅದರಲ್ಲೂ ಕಾಂತಾರ ಚಾಪ್ಟರ್​​ 1ರಲ್ಲಿ ಇದೇ ಗುಳಿಗನ ಬಗ್ಗೆ ದೊಡ್ಡ ಟ್ವಿಸ್ಟ್​ ಕೊಟ್ಟಿದ್ದಾರೆ ರಿಷಬ್ ಶೆಟ್ಟಿ.. ಇಲ್ಲಿ ರುದ್ರ ಗುಳಿಗ, ರಾಹು ಗುಳಿಗ, ನೆತ್ತರ ಗುಳಿಗ ಈ ರೀತಿಯ ಪಾತ್ರಗಳನ್ನೂ ಪರಿಚಯಿಸಿದ್ದಾರೆ..ಹಾಗಾದ್ರೆ, ಗುಳಿಗ ಅನ್ನೋ ದೈವ ಒಂದೇ ದೈವವೇ ಅಥವಾ ಗುಳಿಗನಿಗೂ ಬೇರೆ ಬೇರೆ ಪ್ರಕಾರಗಳಿವೆ.
ಉಗ್ರಸ್ವರೂಪಿ ಗುಳಿಗನಿಗೆ ಅಪಾರ ಹಸಿವು ಯಾಕೆ?
ಶಿವಧೂತ ಗುಳಿಗನನ್ನ ನೀವು ಕಾಂತಾರ ಸಿನಿಮಾದಲ್ಲಿ ನೋಡಿದಾಗ ಮತ್ತೊಂದು ಪ್ರಶ್ನೆ ಹುಟ್ಟದೇ ಇರಲಾರದು.. ಗುಳಿಗ ಮೈಮೇಲೆ ಆವಾಹನೆ ಆಗ್ತಿದ್ದಂತೆ ಅವನಿಗೆ ಹೊಟ್ಟೆ ತುಂಬಾ ಊಟ ಕೊಡ್ಬೇಕು.. ಅಧರ್ಮ, ಅನ್ಯಾಯದ ವಿರುದ್ಧ ಸೆಟೆದು ನಿಲ್ಲುವ ಗುಳಿಗನಿಗೆ ಅಪಾರ ಹಸಿವಿರುತ್ತೆ ಅನ್ನೋದು ಕೂಡ ತುಂಬಾ ಜನರಿಗೆ ಗೊತ್ತಿರಲಿಕ್ಕಿಲ್ಲ.. ದೈವ ನರ್ತನದಲ್ಲಿ, ಗುಳಿಗನಿಗೆ ಕೋಳಿ, ಹಾಗೂ ಮಂಡಕ್ಕಿಯನ್ನು ಆಹಾರವನ್ನಾಗಿ ನೀಡಲಾಗುತ್ತದೆ. ಇಂತಹ ಹಸಿವು ನೀಗದ ಗುಳಿಗನನ್ನ ಭೂಮಿಯ ಮೇಲೆ ರಕ್ಷಕ ದೈವವನ್ನಾಗಿಯೇ ಕಳುಹಿಸಲಾಯಿತು ಅನ್ನೋದು ಪುರಾಣಗಳು ಹೇಳುವ ಮತ್ತೊಂದು ಕಥೆ. ಉಗ್ರಸ್ವರೂಪಿ
ಇದನ್ನೂ ಓದಿ: ದಿನಕ್ಕೆ ಒಂದೇ ಹೊತ್ತು ಊಟ.. ಡಿವೋರ್ಸ್ ಕೊಟ್ಟು ಲವ್! ಇದು ಕಾಂತಾರ ವಿಲನ್ ಲೈಫ್​ಸ್ಟೈಲ್
ಗುಳಿಗಿಗೆ ಅಷ್ಟೊಂದು ಹಸಿವಿರೋದಾದ್ರೂ ಯಾಕೆ?
ಗುಳಿಗೆನಿಗೆ ಅಪಾರ ಹಸಿವು.. ಭೂಮಿಯ ಮೇಲಿನ ಸಾವಿರ ಆನೆ ತಿನ್ನುತ್ತಾನೆ. ಸಾವಿರ ಕುದುರೆ ತಿನ್ನುತ್ತಾನೆ. ಸೂರ್ಯನನ್ನೂ ತಿನ್ನಲು ಹೊರಡುತ್ತಾನೆ. ಆಗ ದೇವತೆಗಳಿಗೆ ಭಯವಾಗಿ ವಿಷ್ಣುವಿನ ಮೊರೆ ಹೋದಾಗ ವಿಷ್ಣು ತನ್ನ ಕಿರು ಬೆರಳನ್ನು ಕೊಡುತ್ತಾನೆ ಆಗ ಗುಳಿಗ ಶಾಂತನಾಗುತ್ತಾನೆ. ವಿಷ್ಣುವು ಗುಳಿಗನಿಗೆ ಆಗ ವರವೊಂದನ್ನು ನೀಡುತ್ತಾನೆ. ಭೂಮಿಯ ಮೇಲೆ ಕೆಟ್ಟದನ್ನೆಲ್ಲಾ ತಿನ್ನು ಎಂದು ಆಶೀರ್ವದಿಸುತ್ತಾನೆ. ಅದಕ್ಕೆ ಪ್ರತಿಯಾಗಿ ಭಕ್ತರು ನಿನಗೆ ಯಥೇಚ್ಛ ಉಪಹಾರ ಕೊಡಲಿ ಎಂದು ಹರಸಿ ಕಳಿಸುತ್ತಾನೆ ಅನ್ನೋ ಮತ್ತೊಂದು ಕಥೆಯೂ ಇದೆ..ತುಳುನಾಡಿನಲ್ಲಿ ಏಳು ಸ್ಥಾನದಲ್ಲಿ ನೆಲೆಸುವ ಸಪ್ತಮಾತೃಕೆಯರು ಗುಳಿಗನ ನಿಷ್ಠೆಗೆ ಪ್ರತಿಯಾಗಿ ಆತನನ್ನ ಕ್ಷೇತ್ರಪಾಲನನ್ನಾಗಿ ನೆಲೆಸುವಂತೆ ಆಶೀರ್ವಾದಿಸಿದ್ದರಂಂತೆ..ಇಷ್ಟೆಲ್ಲಾ ನೋಡಿದ್ರೆ, ಗುಳಿಗ ಬರೀ ಒಂದೇ ದೈವವಲ್ಲ.. ಈ ದೈವದ ಜೊತೆ ಸೇರಿ ರಾಹು ಗುಳಿಗ, ತಂತ್ರ ಗುಳಿಗ, ನೆತ್ತರ ಗುಳಿಗ, ಅಗ್ನಿ ಗುಳಿಗ, ಮೂಕಾಂಬಿ ಗುಳಿಗ, ಸನ್ಯಾಸಿ ಗುಳಿಗ, ಒರಿಮಾಣಿ ಗುಳಿಗ, ಹೈಗುಳಿ ಎಂದೆಲ್ಲಾ ವಿವಿಧ ರೂಪದಲ್ಲಿ ಆರಾಧನೆ ಪಡೆಯುವ ಕಲಿಯುಗದ ಧರ್ಮಪಾಲಿಪ ಕ್ಷೇತ್ರಪಾಲ ದೈವವಾಗಿದ್ದಾನೆ ಅಂತಲೂ ಹೇಳಲಾಗುತ್ತೆ.
ಇದನ್ನೂ ಓದಿ: ಕಾಂತಾರ, ರಿಷಭ್ ಶೆಟ್ಟಿ ಬಗ್ಗೆ ರಾಕಿ ಭಾಯ್ ಯಶ್​ ಏನ್ ಹೇಳಿದರು..? ರುಕ್ಮಿಣಿ ವಸಂತ್​..
ವಿಶ್ವಾಸಕ್ಕೆ ಇನ್ನೊಂದು ಹೆಸರು ನಾವು ನಂಬಿರುವ ದೈವ ಅದು ಯಾವ ರೂಪದಲ್ಲಿ ಯಾವಾಗ ಬೇಕಾದರೂ ಇರುತ್ತದೆ. ಆದರೆ ಅದರ ನಂಬಿಕೆ, ಸತ್ಯ ಒಂದೇ, ಆರಾಧನೆ ರೀತಿ, ನಿಯಮ ಬೇರೆ ಬೇರೆ ಇರಬಹುದು. ನಮ್ಮ ನಂಬಿಕೆಗೆ ಸ್ಪಷ್ಟ ಕೈಗನ್ನಡಿ ಈ ದೈವ ಆರಾಧನೆ. ಕರಾವಳಿ ಭಾಗದಲ್ಲಿ ದೈವರಾಧನೆ ಎನ್ನುವುದಕ್ಕೆ ಒಂದು ಹಳೆಯ ಕಟ್ಟಪಾಡು ಇದೆ. ಜೊತೆ ಜೊತೆಗೆ ಇತಿಹಾಸವು ಇದೆ. ಇಲ್ಲಿ ಒಂದೊಂದು ವಿಭಿನ್ನ ಶೈಲಿ ಇದೆ. ಈ ದೈವ ನೆಲೆಗೆ ಒಂದು ಅದ್ಭುತ ಸಾಕ್ಷಿ ಕೂಡ ಇದೆ...ಆ ಸಾಕ್ಷಿಯೇ ಈ ಉಗ್ರರೂಪಿ ಗುಳಿಗ..
-ಸುಧಾಕರ್,ನ್ಯೂಸ್‌ಫಸ್ಟ್
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ