/newsfirstlive-kannada/media/post_attachments/wp-content/uploads/2023/06/Siddaramaiah-1.jpg)
ಬೆಂಗಳೂರು: ಜನರಿಗೆ ತಾವು ಕೊಟ್ಟ ಗ್ಯಾರೆಂಟಿಗಳನ್ನ ಪೂರೈಸಲು ಕಸರತ್ತು ಮಾಡುತ್ತಿರೋ ಸರ್ಕಾರ ಬ್ಯುಸಿಯಾಗಿದೆ. ಜೊತೆಗೆ ಮುಂದಿನ ಚುನಾವಣೆಗಳಲ್ಲಿ ಗೆಲುವು ಸಾಧಿಸೋಕೆ ಮಾಡಬೇಕಾದ ಕಸರತ್ತುಗಳತ್ತ ಗಮನ ಹರಿಸ್ತಿರೋ ಸರ್ಕಾರಕ್ಕೆ ಈ ಒಂದು ಸಮಸ್ಯೆ ಬಗ್ಗೆ ಅರಿವೇ ಇಲ್ಲದಾಯ್ತಾ? ರಾಜ್ಯದಲ್ಲಿ ಔಷಧಿ ಕೊರತೆಯಿಂದ ಅಘೋಷಿತ ಆರೋಗ್ಯ ತುರ್ತು ಪರಿಸ್ಥಿತಿ ನಿರ್ಮಾಣವಾಯ್ತಾ? ಎಂಬ ಪ್ರಶ್ನೆ ಮೂಡುತ್ತಿದೆ. ಸಾಕಷ್ಟು ಬಡ ಮತ್ತು ಮಧ್ಯಮ ವರ್ಗದ ಜನರು ಸರ್ಕಾರಿ ಆಸ್ಪತ್ರೆಗಳನ್ನೇ ಅವಲಂಬಿಸಿದ್ದಾರೆ.
ಸಣ್ಣ ಆರೋಗ್ಯ ಸಮಸ್ಯೆ ಇರಲಿ, ದೊಡ್ಡ ಆರೋಗ್ಯ ಸಮಸ್ಯೆ ಇರಲಿ ಸರ್ಕಾರಿ ಆಸ್ಪತ್ರೆಗಳನ್ನೇ ಹುಡುಕಿ ಬರೋ ರೋಗಿಗಳಿಗೆ ಸಂಜೀವಿನಿ ಸಿಗುತ್ತಿಲ್ಲ ಅನ್ನೋ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಈ ಮೂಲಕ ರಾಜ್ಯದಲ್ಲಿ ಅಘೋಷಿತ ಮೆಡಿಕಲ್ ಎಮರ್ಜೆನ್ಸಿ ಶುರುವಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಜನರಿಗೆ ಸಾಮಾನ್ಯವಾಗಿ ಬೇಕಿರೋ ಔಷಧಿಗಳು ಸಿಗುತ್ತಿಲ್ಲವಾದ್ದರಿಂದ ಖಾಸಗಿ ಮೆಡಿಕಲ್ ಶಾಪ್ಗಳಲ್ಲಿ ಹಣ ಕೊಟ್ಟು ಔಷಧಗಳನ್ನ ಪಡೆಯುವಂತಾಗಿದೆ. ಸುಮಾರು 600 ಕೋಟಿ ಮೊತ್ತದ ಔಷಧಿಗಳಿಗೆ ಬೇಡಿಕೆ ಇದ್ದು, ಪೂರೈಕೆ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಅಷ್ಟಕ್ಕೂ ಯಾವ್ಯಾವ ಆರೋಗ್ಯ ಸಮಸ್ಯೆಗೆ ಔಷಧಿ ಕೊರತೆ ಉಂಟಾಗಿದೆ.
ಶ್ವಾಸಕೋಶ ಸಮಸ್ಯೆಗೆ ಸಂಬಂಧಿಸಿದ ಸಮಸ್ಯೆಗಳು, ಕರಳು, ರಕ್ತಹೀನತೆ, ಸರ್ಪಸುತ್ತು, ಕಣ್ಣು ಸೋಂಕು, ನ್ಯುಮೋನಿಯಾ, ಕ್ಯಾನ್ಸರ್, ಅಸ್ತಮಾ, ಸಕ್ಕರೆ ಕಾಯಿಲೆ, ನಿದ್ರಾಹೀನತೆ, ರಕ್ತದೊತ್ತಡ, ಗರ್ಭಾಶ್ರಯ ರಕ್ತಸ್ರಾವ, ಶೀತ, ಹೃದಯಾಘಾತ, ಮೂಳೆ, ತುರಿಕೆ, ಫಂಗಸ್ ಮೈಗ್ರೇನ್, ಯೋನಿ ಸೋಂಕು,ಅನಸ್ತೇಶಿಯಾ, ಹುಣ್ಣು, ನೋವು, ಹೃದಯ ಶಸ್ತ್ರಚಿಕಿತ್ಸೆ, ರಕ್ತ ಹೆಪ್ಪುಗಟ್ಟುವಿಕೆ, ವಾಕರಿಕೆ, ವಾಂತಿ, ಮಿದುಳು ಮತ್ತು ನರಗಳಿಗೆ ಸಂಬಂಧ ಪಟ್ಟ ಸಮಸ್ಯೆಗಳಿಗೆ ಬೇಕಾದ ಔಷಧಿಗಳು ರೋಗಿಗಳಿಗೆ ಸಿಗುತ್ತಿಲ್ಲ.
ಪ್ಯಾರಸಿಟಮಲ್, ಅಲ್ಬುಮಿನಿ, ಆ್ಯಂಪ್ಸಿಲಿನ್, ಲೆವೊಥ್ರಕ್ಸಿನ್, ವಿಲ್ಡಗ್ಲೀಪ್ಟಿನ್, ಅಕ್ಲೆವೀರ್, ಪ್ಯಾರಾಸಿಟಾ, ನ್ಯುಸ್ಟೊಜಿಮೈನ್, ಸಬ್ಲೋಟಮಲ್, ಅಸ್ಟೋಪೈನ್, ಡಿಕ್ಲೋಮೈನ್, ಮಿಡರೆಲಂ, ಅಝಥ್ರೊಮೈಸಿನ್, ಥಿಯೋಪ್ಲಲೈನ್, ಡಿಕ್ಲೋಪೆನಕ್, ಗ್ಲೂಕೋಸ್, ಬ್ಯಾಂಡೇಜ್, ಸರ್ಜಿಕಲ್, ಇಂಜೆಕ್ಷನ್ ಸೇರಿ ಹಲವು ಮಾತ್ರೆಗಳ ಅಭಾವ ಇರೋದು ಬೆಳಕಿಗೆ ಬಂದಿದೆ.
ಕೆಎಸ್‌ಎಂಎಸ್‌ಸಿಎಲ್ ಪ್ರತಿ ವರ್ಷ ಟೆಂಡರ್‌ಗಳನ್ನು ನಡೆಸಿ ನೂರಾರು ಕೋಟಿ ಮೌಲ್ಯದ ಮಾತ್ರೆ, ವೈದ್ಯಕೀಯ ಸಲಕರಣೆ ದಾಸ್ತಾನು ಮಾಡುತ್ತೆ. ಆದ್ರೆ ಈ ವರ್ಷ ಆಗಸ್ಟ್ ಬಂದ್ರೂ ಟೆಂಡರ್ ಕರೆದಿಲ್ಲ. ಏಪ್ರಿಲ್ನಲ್ಲೇ ಟೆಂಡರ್ ಪ್ರಕ್ರಿಯೆ ಮುಗಿಯಬೇಕಿತ್ತು. ಆದ್ರೆ 2023-24ರ ಸಾಲಿನಲ್ಲಿ ಟೆಂಡರ್‌ಗಳು ಇನ್ನೂ ಅಂತಿಮವಾಗಿಲ್ಲ. ಹೀಗಾಗಿ ಔಷಧ ದಾಸ್ತಾನು ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎನ್ನಲಾಗ್ತಿದೆ. ಪ್ರತಿ ಬಾರಿ ವೈದ್ಯಕೀಯ ಸರಬರಾಜು ನಿಗಮದಲ್ಲಿ ಬಂದ ಔಷಧವನ್ನ ಸಂಗ್ರಹ ಮಾಡಲಾಗುತ್ತೆ. 23 ಜಿಲ್ಲಾಸ್ಪತ್ರೆ, 161 ತಾಲೂಕು ಆಸ್ಪತ್ರೆ, 203 ಸಮುದಾಯ ಆರೋಗ್ಯ ಕೇಂದ್ರ, 2,331 ಪ್ರಾಥಮಿಕ ಆರೋಗ್ಯ ಕೇಂದ್ರ, 179 ನಗರ ಆರೋಗ್ಯ ಕೇಂದ್ರ , 3000 ಕ್ಕೂ ಹೆಚ್ಚು ಸರ್ಕಾರಿ ಆಸ್ಪತ್ರೆಗಳಲ್ಲಿ ಸಕಾಲದಲ್ಲಿ ಪೂರೈಕೆ ಮಾಡುವಂತೆ ದಾಸ್ತಾನು ಮಾಡಲಾಗುತ್ತೆ. ಆದ್ರೆ ಈ ಬಾರಿ ಇನ್ನೂ ಏನೂ ಆಗಿಲ್ಲ. ನೂತನ ಸರ್ಕಾರದ ಮುಂದೆ ಸಾಲು ಸಾಲು ಸವಾಲುಗಳು ಬರ್ತಾನೇ ಇದೆ. ಇದನ್ನ ಸರ್ಕಾರ ಆದಷ್ಟು ಬೇಗ ಬಗೆಹರಿಸಬೇಕಿದೆ. ಇಲ್ಲವಾದರೇ ಮುಂದೆ ಮತ್ತಷ್ಟು ದೊಡ್ಡ ಸಮಸ್ಯೆಗಳು ಉಲ್ಬಣವಾಗೋ ಲಕ್ಷಣಗಳು ಎದ್ದು ಕಾಣುತ್ತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ